ಬೆಂಗಳೂರು: ಚಾರ್ಮಾಡಿ ಘಾಟ್ ನಲ್ಲಿ ಕಾಡ್ಗಿಚ್ಚಿಗೆ ಅರಣ್ಯ ನಾಶವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಕಾಡ್ಗಿಚ್ಚು ಸಂಬಂಧ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಎಷ್ಟು ಸಮಯದಲ್ಲಿ ನಂದಿಸುವ ಕಾರ್ಯ ನಡೆದಿದೆ. ಹಾನಿಯಾದ ಅರಣ್ಯ ಪ್ರದೇಶವೆಷ್ಟು ಎಂಬೆಲ್ಲಾ ಮಾಹಿತಿ ಕೇಳಿದ್ದಾರೆ.
ಬೇಸಿಗೆ ಸಮೀಪಿಸುತ್ತಿದ್ದು, ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಯಾವುದೇ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸಲು ಸಚಿವರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಕಾಡ್ಗಿಚ್ಚು ನಂದಿಸಲು ಅಗ್ನಿಶಾಮಕ ಸಾಧನ ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದ ಆದ ಹಾನಿಯ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.
ಕಾಡ್ಗಿಚ್ಚಿನ ಬಗ್ಗೆ ಸಂಬಂಧಿತ ಅರಣ್ಯ ವಲಯಕ್ಕೆ ಮಾಹಿತಿ ದೊರೆತ ಎಷ್ಟು ಸಮಯದಲ್ಲಿ ಬೆಂಕಿ ನಂದಿಸಲು ಕ್ರಮ ವಹಿಸಲಾಗಿದೆ. ಯಾವ ವಿಧಾನ ಬಳಸಲಾಗಿದೆ. ಎಷ್ಟು ಸಂಭಾವ್ಯ ಹಾನಿ ತಡೆಯಲಾಗಿದೆ. ಹಾನಿಯಾದ ಪ್ರಮಾಣ ಎಷ್ಟು ಎಂಬ ವಿವರ ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.