ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ದಿನನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅಲ್ಲದೇ ಮೈಕ್ರೋ ಫೈನಾನ್ಸ್ ನವರ ಕಾಟಕ್ಕೆ ಈಗಾಗಲೇ ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿದೆ.
ಈ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಹೊಸ ಕಾನೂನಿನ ಮೂಲಕ ಮೀಟರ್ ಬಡ್ಡಿ ಮಾಫಿಯಾ, ಖಾಸಗಿ ಹಣಕಾಸು ಸಂಸ್ಥೆಗಳ ದಂಧೆಗೆ ಕಡಿವಾಣ ಹಾಕಲು ನಿರ್ಧರಿಸಿತ್ತು. ನಿಗದಿತ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ. ಸಾಲ ವಸೂಲಿಗೆ ಕಿರುಕುಳ ನೀಡಿದಲ್ಲಿ ಕನಿಷ್ಠ 10 ವರ್ಷ ಜೈಲು, ಲಕ್ಷಾಂತರ ರೂ. ದಂಡ ವಿಧಿಸುವ ಬಗ್ಗೆ ಕಾನೂನು ತರಲು ಸರ್ಕಾರ ಚಿಂತನೆ ನಡೆಸಿತ್ತು.
ಇದರ ಮಧ್ಯೆ ಜನವರಿ 25 ರ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆ 11 ಗಂಟೆಗೆ ತಮ್ಮ ಗೃಹ ಕಛೇರಿ ʼಕೃಷ್ಣಾʼ ದಲ್ಲಿ ಮಹತ್ವದ ಸಭೆ ಕರೆದಿದ್ದು, ಈ ಸಭೆಯಲ್ಲಿ ರಾಜ್ಯದಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಚರ್ಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಇದರ ಕಡಿವಾಣಕ್ಕೆ ಮಹತ್ವದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.