ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ಬಂಡಾಯದ ಬಿರುಗಾಳಿ ಎದ್ದಂತೆ ಕಾಣುತ್ತಿದೆ. ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಪಕ್ಷ ಬಿಡಲು ಸಿದ್ಧ ಎಂಬ ಹೇಳಿಕೆ ನೀಡಿದ್ದರು. ಅಲ್ಲದೇ ಜನಾರ್ಧನ ರೆಡ್ಡಿ ವರಿಷ್ಠರ ಬಳಿ ತನ್ನ ಮೇಲೆ ದೂರು ನೀಡುತ್ತಿದ್ದು, ಇದರಿಂದ ನನಗೆ ಬೇಸರವಾಗಿದೆ ಎಂದು ಕಿಡಿಕಾರಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ, ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಶ್ರೀರಾಮುಲು ಕೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಲಿಂಕ್ ಕೊಟ್ಟಿದ್ದಾರೆ. ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ಡಿ.ಕೆ.ಶಿವಕುಮಾರ್, ರಾಮುಲು ಜೊತೆ ಮಾತನಾಡಿದ್ದಾರೆ. ಈ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಹೊರತು ನನಗೆ ಯಾರೂ ನೇರವಾಗಿ ಬಂದು ಹೇಳಿಲ್ಲ. ಹಾಗಾಗಿ ಶ್ರೀರಾಮುಲುಗೆ ಪಕ್ಷದ ಬಗ್ಗೆ, ನಾಯಕರ ಬಗ್ಗೆ ಅಸಮಾಧಾನವಾಗುತ್ತಿದೆ ಎಂದು ಹೇಳಿದ್ದಾರೆ.
ರಾಮುಲುಗೆ ಒಂದು ವಿಷಯ ಹೇಳುತ್ತೇನೆ. ನೀನು ಪಕ್ಷದಲ್ಲಿ ಇರಬೇಕಾ ಅಥವಾ ಪಕ್ಷ ಬಿಡಬೇಕಾ ಎನ್ನುವುದು ನಿನಗೆ ಹಾಗೂ ಪಕ್ಷಕ್ಕೆ ಬಿಟ್ಟ ವಿಚಾರ. ಇದು ಜನಾರ್ಧನ ರೆಡ್ಡಿ ವಿಚಾರವಲ್ಲ. ನಿನ್ನ ಮನಸ್ಸಿಗೆ ಹೇಗೆ ತೋಚುತ್ತದೆ ಅದನ್ನು ನೀನು ಮಾಡು. ಅದು ನನ್ನ ವೈಯಕ್ತಿಕ ಹಾಗೂ ನಿನ್ನ ರಾಜಕೀಯ ವಿಚಾರ. ಅದನ್ನ ಬಿಟ್ಟು ಜನಾರ್ಧನ ರೆಡ್ಡಿ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.