ಮೈಸೂರು: ಪತಿಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯಲ್ಲಿ ನಡೆದಿದೆ.
ಪತ್ನಿ ಮಧುರಾ ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಾದ ಪತಿ ಮಲ್ಲೇಶ್ ನಾಯ್ಕ್ ಮನೆಗೆ ಬರುತ್ತಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆರೋಪಿ ಮಲ್ಲೇಶ್ ನಾಯ್ಕ್ ಕೃತ್ಯವಸಗಿದ್ದ ಬಗ್ಗೆ ಪುತ್ರ ಮಾಹಿತಿ ನೀಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಧುರಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲ್ಲೇಶ್ ನಾಯ್ಕ್ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿ.ಬಿ. ತಾಂಡಾ ನಿವಾಸಿಯಾಗಿದ್ದು, ಎಂಟು ವರ್ಷದ ಹಿಂದೆ ಮದುವೆಯಾಗಿತ್ತು. ಅದೇ ಗ್ರಾಮದ ಮಧುರಾ ಮದುವೆಯಾಗಿದ್ದ ಮಲ್ಲೇಶ್ ಹೆಚ್.ಡಿ. ಕೋಟೆ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ.
ಹೆಚ್.ಡಿ. ಕೋಟೆಯ ಹನುಮಂತನಗರದಲ್ಲಿದ್ದ ಮಲ್ಲೇಶ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನಲ್ಲದೇ ಅನುಮಾನದಿಂದ ನೋಡುತ್ತಿದ್ದ. ನಿತ್ಯ ಕುಡಿದು ಬಂದು ನಿವೇಶನ ಕೊಡಿಸುವಂತೆ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ನೊಂದ ಪತ್ನಿ ಮಧುರಾ ಒಂದೆರಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡು ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಧುರಾ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಘಟನೆ ಸಂಬಂಧ ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.