ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪೈಕಿ ಶೇಕಡ 75 ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.
ಈಗಾಗಲೇ ಪ್ರಕಟಿಸಲಾದ ಅಂತಿಮ ವೇಳಾಪಟ್ಟಿಯಂತೆ ರಾಜ್ಯಾದ್ಯಂತ ಮಾರ್ಚ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಒಂದು ನಡೆಯಲಿದೆ.
ಪರೀಕ್ಷೆಗೆ ಕಾಲೇಜು ವಿದ್ಯಾರ್ಥಿಗಳು, ಖಾಸಗಿ, ಪುನಾವರ್ತಿತ ವಿದ್ಯಾರ್ಥಿಗಳ ನೋಂದಣಿ ಪೂರ್ಣಗೊಂಡಿದ್ದರೂ ತರಗತಿ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಪರೀಕ್ಷೆಗೆ ಹಾಜರಾಗಲು ಶೇಕಡ 75 ರಷ್ಟು ತರಗತಿ ಹಾಜರಾತಿ ಕಡ್ಡಾಯವಾಗಿದೆ.
ಹೀಗಾಗಿ ಪರೀಕ್ಷೆ ಬರೆಯಲು ಅರ್ಹರಿಲ್ಲದೆ ತರಗತಿ ಹಾಜರಾತಿ ಶೇಕಡ 75 ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳ ಮಾಹಿತಿ ನೀಡಿದಲ್ಲಿ ಅಂತಹ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರ ತಡೆಹಿಡಿಯಲಾಗುವುದು. ಹಾಗೆಯೇ ಪ್ರವೇಶ ಪತ್ರಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ಪ್ರಾಂಶುಪಾಲರು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ.