ಮೈಸೂರು: ಹಾಡ ಹಗಲೇ ಮೈಸೂರಿನಲ್ಲಿ ಕೇರಳ ಮೂಲದ ಉದ್ಯಮಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಎರಡು ಕಾರುಗಳು ಪತ್ತೆಯಾಗಿವೆ.
ದರೋಡೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಉದ್ಯಮಿಯ ಕಾರು ಹಾಗೂ ದರೋಡೆ ಕೋರರ ಕಾರು ಪತ್ತೆಯಾಗಿದೆ.
ಉದ್ಯಮಿ ಅಶ್ರಫ್ ಅಹ್ಮದ್ ಹಾಗೂ ಅವರ ಕಾರು ಚಾಲಕ ಸೂಫಿ ಎಂಬುವವರ ಕಾರನ್ನು ಹೆಚ್.ಡಿ.ಕೋಟೆ ಬಳಿಯ ಹಾರೋಹಳ್ಳಿ ಬಳಿ ಅಡ್ಡಗಟ್ಟಿದ್ದ ದರೋಡೆಕೋರರ ಗ್ಯಾಂಗ್, ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ನಡೆಸಿ ಹಣ ಹಾಗೂ ಕಾರಿನ ಸಮೇತ ಎಸ್ಕೇಪ್ ಆಗಿದ್ದರು.
ಸುಮಾರು 12 ಕೀ.ಮೀ ದೂರದಲ್ಲಿ ಉದ್ಯಮಿಯ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಉದ್ಯಮಿ ಕಾರು ಮಾಂಬಳ್ಳಿ ಬಳಿ ಪತ್ತೆಯಾಗಿದೆ. ಇನ್ನೊಂದು ಕಾರು ಗೋಪಾಲ್ ಪುರ ಬಳಿ ಪತ್ತೆಯಾಗಿದೆ. ಎರಡೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡ ರಚನೆ ಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ.