ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಆರಂಭವಾಗಿರುವ ನಡುವೆ ಬೆಳಗಾವಿ ಶಾಸಕ ಅಭಯ್ ಪಾಟೀಲ್, ರಾಜ್ಯ ಬಿಜೆಪಿ ನಾಯಕತ್ವ, ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅಭಯ್ ಪಾಟೀಲ್, ಸಿ.ಟಿ.ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ. ಸಿ.ಟಿ ರವಿಗೆ ಟಾರ್ಚರ್ ಕೊಟ್ಟರೂ ಇದನ್ನು ಗಂಭೀರವಾಗಿ ಪರಿಗನಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ಶಾಸಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಪ್ರಕರಣದಿಂದ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಶಾಸಕರಿಗೆ ಈ ರೀತಿ ಪರಿಸ್ಥಿತಿಯಾದರೆ ಇನ್ನು ಕಾರ್ಯಕರ್ತರ ಸ್ಥಿತಿ ಏನು? ಇನ್ನಾದರೂ ಪಕ್ಷದ ನಾಯಕರು ಎಚ್ಚೆತ್ತು ಹೋರಾಟ ಮಾಡಬೇಕು ಎಂದರು.
ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಹೈಕಮಾಂಡ್ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕು ಎಂದು ಹೇಳಿದರು.