ತಿರುವನಂತಪುರಂ: ಪ್ರಿಯಕರನ ಕೊಲೆ ಮಾಡಿದ ಪ್ರೇಯಸಿಗೆ ಕೇರಳ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ. ಪ್ರೇಯಸಿ ಗ್ರೀಷ್ಮಾ(22) ಶಿಕ್ಷೆಗೆ ಒಳಗಾದ ಯುವತಿ. 2022ರಲ್ಲಿ ಪ್ರಿಯಕರ ಶಾರೋನ್ ರಾಜ್ ನನ್ನು ಕೊಲೆ ಮಾಡಿದ್ದ ಈ ಪ್ರಕರಣ ಕೇರಳದಲ್ಲಿ ಬಾರಿ ಸದ್ದು ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೇರಳದ ನೆಯ್ಯಾಂಟಿಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪ್ರಮುಖ ಆರೋಪಿ ಗ್ರೀಷ್ಮಾ ಅಪರಾಧ ಸಾಬೀತಾಗಿದೆ ಎಂದು ಘೋಷಿಸಿ ಗಲ್ಲು ಶಿಕ್ಷೆ ವಿಧಿಸಿದೆ.
ಪ್ರೀತಿಯ ಪಾವಿತ್ರ್ಯಕ್ಕೆ ಧಕ್ಕೆ ತಂದ ಪ್ರಕರಣ ಇದಾಗಿದೆ ಎಂದು ಕೋರ್ಟ್ ಹೇಳಿದ್ದು, ಪ್ರಕರಣದ ಇನ್ನೊಬ್ಬ ಆರೋಪಿ ಗ್ರೀಷ್ಮಾ ಚಿಕ್ಕಪ್ಪ ನಿರ್ಮಲ್ ಕುಮಾರ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಗ್ರೀಷ್ಮಾ ತಾಯಿ ಸಿಂಧು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
2022 ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯ ಖಾಸಗಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಎಂಎ ಇಂಗ್ಲಿಷ್ ವ್ಯಾಸಂಗ ಮಾಡುತ್ತಿದ್ದ ಅಪರಾಧಿ ಗ್ರೀಷ್ಮಾ ಅದೇ ಕಾಲೇಜಿನಲ್ಲಿ ಬಿಎಸ್ಸಿ ರೇಡಿಯೋಲಜಿ ಮೂರನೇ ವರ್ಷದಲ್ಲಿ ಓದುತ್ತಿದ್ದ ಕೇರಳದ ಪರಶಾಲ ಮೂಲದ ಶಾರೋನ್ ರಾಜ್ ಜೊತೆ ಅನ್ಯೋನ್ಯತೆಯಿಂದ ಇದ್ದಳು.
ಗ್ರೀಷ್ಮಾಗೆ ಸೈನಿಕನೊಂದಿಗೆ ವಿವಾಹ ಪ್ರಸ್ತಾಪ ಬಂದಾಗ ಆಕೆ ಶಾರೋನ್ ನನ್ನು ದೂರ ಮಾಡಲು ಪ್ರಯತ್ನಿಸಿದ್ದಳು. ಇದನ್ನು ಶಾರೋನ್ ವಿರೋಧಿಸಿದಾಗ ಮತ್ತೆ ಆತ್ಮೀಯತೆಯಿಂದ ಇರುವಂತೆ ನಟಿಸಿ ಕೊಲೆಗೆ ಸಂಚು ರೂಪಿಸಿದ್ದಳು. ಜ್ಯೂಸ್ ಚಾಲೆಂಜ್ ನೆಪದಲ್ಲಿ ಪಾನೀಯದಲ್ಲಿ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಬೆರೆಸಿ ಶಾರೋನ್ ಕುಡಿಸಿ ಕೊಲೆ ಪ್ರಯತ್ನ ಮಾಡಿದ್ದಳು. ಆದರೆ, ಅದು ಈಡೇರಿರಲಿಲ್ಲ.
2022ರ ಅಕ್ಟೋಬರ್ 14ರಂದು ಕನ್ಯಾಕುಮಾರಿ ಜಿಲ್ಲೆಯಿಂದ ಕೇರಳದ ತಮ್ಮ ಮನೆಗೆ ಶಾರೋನ್ ಕರೆಸಿಕೊಂಡ ಗ್ರೀಷ್ಮಾ ಆಯುರ್ವೇದ ಔಷಧಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಳು. ಬಹು ಅಂಗಾಂಗ ವೈಫಲ್ಯ ಉಂಟಾಗಿ ಶಾರೋನ್ 11 ದಿನ ಸಾವು ಬದುಕಿನ ಹೋರಾಟ ನಡೆಸಿ ಅಕ್ಟೋಬರ್ 25 ರಂದು ಮೃತಪಟ್ಟಿದ್ದರು.
ರೇಷ್ಮಾ ವಿರುದ್ಧ ಕೊಲೆ, ಅಪಹರಣ, ವಿಷಪ್ರಾಶನ ಮತ್ತು ಸಾಕ್ಷ್ಯ ನಾಶ ಆರೋಪ ಸಾಬೀತಾಗಿದ್ದು, ಆಕೆಯ ಕೃತ್ಯವು ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದೆ. ಪ್ರೀತಿಯ ಪಾವಿತ್ರ್ಯತೆಯನ್ನು ಹಾಳು ಮಾಡಿದೆ ಎಂದು ಕೋರ್ಟ್ ಹೇಳಿದೆ.
ಪೋಷಕರಿಗೆ ನಾನೊಬ್ಬಳೇ ಪುತ್ರಿಯಾಗಿದ್ದು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ನನ್ನ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡಬೇಕೆಂದು ಗ್ರೀಷ್ಮಾ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆಕೆಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅಪರಾಧಿಯು ಕ್ರಿಮಿನಲ್ ಮನಸ್ಥಿತಿ ಹೊಂದಿದ್ದು, ಭೀಕರ ಹತ್ಯೆಗೆ ಸಂಚು ರೂಪಿಸಿರುವುದು ಸಾಬೀತಾಗಿದೆ. ಇದು ಪೂರ್ವ ನಿಯೋಜಿತ ಅಪರಾಧ ಕೃತ್ಯವಾಗಿದೆ. ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆ ಕಾರಣದಿಂದ ಯಾವುದೇ ವಿನಾಯಿತಿಗೆ ಆಕೆ ಅರ್ಹಳಲ್ಲ ಎಂದು ನ್ಯಾಯಪೀಠ ಹೇಳಿದ್ದು, ಗಲ್ಲು ಶಿಕ್ಷೆ ವಿಧಿಸಿದೆ.