ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಷರತ್ತಿಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ತಲೆ ಬಾಗಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 9 ವರ್ಷಗಳ ನಂತರ ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿರುವುದಾಗಿ ಘೋಷಿಸಿದ ಬೆನ್ನಲ್ಲೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ರಣಜಿ ಪಂದ್ಯಕ್ಕೆ ಮರಳಲಿದ್ದಾರೆ.
12 ವರ್ಷಗಳ ನಂತರ ವಿರಾಟ್ ಕೊಹ್ಲಿ ರಣಜಿ ಪಂದ್ಯವನ್ನಾಡಲಿದ್ದಾರೆ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಜನವರಿ 30 ರಿಂದ ಆರಂಭವಾಗಲಿರುವ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಜನವರಿ 23ರಿಂದ ನಡೆಯಲಿರುವ ಸೌರಾಷ್ಟ್ರ ಪಂದ್ಯಕ್ಕೆ ಕೊಹ್ಲಿ ಗಾಯದ ಕಾರಣ ಗೈರಾಗಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಸೋತ ನಂತರ ಸ್ಟಾರ್ ಆಟಗಾರರು ಕೂಡ ದೇಸಿ ಕ್ರಿಕೆಟ್ ನಲ್ಲಿ ಆಡಬೇಕು ಎಂದು ಬಿಸಿಸಿಐ ತಾಕೀತು ಮಾಡಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ರಣಜಿ ಪಂದ್ಯವನ್ನಾಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಬಿಸಿಸಿಐ ಷರತ್ತಿಗೆ ತಲೆಬಾಗಿದ್ದಾರೆ.