ಬೆಂಗಳೂರು: ಬೆಂಗಳೂರಿನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೆಆರ್ ಮಾರುಕಟ್ಟೆಯಲ್ಲಿ ಭಾನುವಾರ ತಡ ರಾತ್ರಿ 11:30 ಸುಮಾರಿಗೆ ನಡೆದಿದೆ.
ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಮಹಿಳೆಯನ್ನು ಬೆದರಿಸಿ ಮೊಬೈಲ್, ಹಣ, ತಾಳಿ ಸರ ಕಸಿದುಕೊಂಡು ಹೋಗಿದ್ದಾರೆ. ಕೆಆರ್ ಮಾರುಕಟ್ಟೆಯ ಗೋಡೌನ್ ಸ್ಟ್ರೀಟ್ ನಲ್ಲಿ ಅತ್ಯಾಚಾರ ಎಸಗಿ ದರೋಡೆ ನಡೆಸಲಾಗಿದೆ.
ಯಲಹಂಕಕ್ಕೆ ಹೋಗಲು ಮಹಿಳೆ ಭಾನುವಾರ ರಾತ್ರಿ ಕೆಆರ್ ಮಾರುಕಟ್ಟೆಯಲ್ಲಿ ಕಾಯುತ್ತಿದ್ದ ವೇಳೆ ಅಪರಿಚಿತರಿಬ್ಬರು ಅಲ್ಲಿಗೆ ಬಂದಿದ್ದು, ಮಹಿಳೆ ಅವರಿಗೆ ಬಸ್ ಬಗ್ಗೆ ವಿಚಾರಿಸಿದ್ದಾರೆ. ಬಸ್ ತೋರಿಸುವುದಾಗಿ ದುಷ್ಕರ್ಮಿಗಳು ಗೋಡೌನ್ ಸ್ಟ್ರೀಟ್ ಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಮಹಿಳೆಯನ್ನು ಬೆದರಿಸಿ ಮೊಬೈಲ್, ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಈ ಕುರಿತಾಗಿ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಮತ್ತು ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.