ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಿನ್ನೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರನ್ನು ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆslAgide.
ಈ ಸಂದರ್ಭದಲ್ಲಿ ಆರ್. ಮೋಹನ್‌ಕುಮಾರ್ ಅವರು, ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ಅಭಿವೃದ್ಧಿಗೆ ತುರ್ತು ಅಗತ್ಯವಾಗಿರುವ ಶಾಲಾ ಕಟ್ಟಡಗಳ ದುರಸ್ತಿ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು ಹಾಗೂ ಪಠ್ಯ ವಸ್ತುಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನೌಕರರ ಸಂಘದ ಜಿಲ್ಲಾ ಘಟಕ ವಿಶೇಷ ಗಮನಹರಿಸಲಿದೆ ಎಂದು ಸಚಿವರ ಗಮನಕ್ಕೆ ತಂದರು.
ಅಲ್ಲದೇ, ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸುವುದು ಮತ್ತು ಶಿಕ್ಷಣದ ಗುಣಾತ್ಮಕ ಬದಲಾವಣೆಯಲ್ಲಿ ಸಂಘವು ಪ್ರಮುಖ ಪಾತ್ರ ವಹಿಸಲಿದೆ. ಈ ಮಹತ್ವದ ಸಂದರ್ಭದಲ್ಲಿ ಮಾನ್ಯ ಸಚಿವರು ಅಗತ್ಯ ಸಹಕಾರ ನೀಡುವಂತೆ ಅವರಲ್ಲಿ ಮನವಿ ಮಾಡಿದರು.
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಇಂತಹ ಮಹತ್ವದ ಕಾರ್ಯಕ್ಕೆ ನೌಕರರ ಸಂಘ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿರಲಿ ಅಥವಾ ಕರ್ತವ್ಯ ನಿರ್ವಹಿಸುತ್ತಿರಲಿ ಅಂತಹ ನೌಕರರು, ಧನಿಕರು, ಉದ್ಯಮಿಗಳು ತಾವು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಸ್ತು ಅಥವಾ ಹಣಕಾಸಿನ ನೆರವನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ಪಠ್ಯಪುಸ್ತಕ ಪೂರೈಕೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದಾಗ್ಯೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೂರೈಸಿದ ನಂತರವೂ ಇನ್ನಷ್ಟು ಬೇಕುಗಳ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ಸ್ಥಳೀಯ ದಾನಿಗಳು ಶಾಲೆಗಳ ವಿಕಾಸಕ್ಕೆ ಮುಂದಾಗುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಆರ್.ಪಾಪಣ್ಣ, ರಂಗನಾಥ್, ಕೊಟ್ರೇಶ್, ಡಾ.ಹಿರೇಮರ್, ದಿನೇಶ್, ಸುಮತಿ ರವಿ ಮತ್ತಿತರರು ಉಪಸ್ಥಿತರಿದ್ದರು.