ಬೆಳಗಾವಿ: ಸಿನಿಮಾ ಶೈಲಿಯಲ್ಲಿ ಕುಸ್ತಿ ಪೈಲ್ವಾನ್ ಓರ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಾಪರಾಧಿಗಳು ಸೇರಿ 8 ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ್ ತಾಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿ ಪ್ರಕಾಶ್ ಇರಟ್ಟಿ (26) ಎಂಬ ಪೈಲ್ವಾನ್ ನನ್ನು ಜ.15ರಂದು ಕೊಲೆ ಮಾಡಲಾಗಿತ್ತು. ರೀಲ್ಸ್ ಮಾಡಿ ಬೇರೆಯವರನ್ನು ಉರಿಸಿದ್ದಕ್ಕೆ ಕ್ಷುಲ್ಲಕ ಕಾರಣಕ್ಕೆ ಆರೋಪಿಗಳು ಪೈಲ್ವಾನ್ ಹತ್ಯೆ ಮಾಡಿದ್ದರು.
ಇದೀಗ ಇಬ್ಬರು ಬಾಲಾಪರಾಧಿಗಳು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ರವಿಚಂದ್ರ ಪಾತ್ರೋಟ್, ಉಮೇಶ್ ಕುಮಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಕ್ ಹಾಗೂ ಇಬ್ಬರು ಬಾಲಾರೋಪಿಗಳು ಬಂಧಿತರು.
ಕೊಳವಿ ಗ್ರಾಮದಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಪೈಲ್ವಾನ್ ಪ್ರಕಾಶ್ ಇರಟ್ಟಿ ಹಗೂ ರವಿಚಂದ್ರ ಪಾತ್ರೋಟ್ ನಡುವೆ ಗಲಾಟೆಯಾಗಿತ್ತು. ಗಲಾಟೆ ಬಳಿಕ ಪ್ರಕಾಶ್, ಎರಡು ರೀಲ್ಸ್ ಹಾಕಿ ಆರೋಪಿಗಳನ್ನು ಉರಿಸಿದ್ದನಂತೆ. ಇಷ್ಟಕ್ಕೆ ರವಿಚಂದ್ರ ಗ್ಯಾಂಗ್ ಕಟ್ಟಿಕೊಂಡು ಬೈಕ್ ಅಡ್ಡಗಟ್ಟಿ ಪೈಲ್ವಾನ್ ಕೊಲೆ ಮಾಡಿದ್ದಾನೆ.