ಹೊನ್ನಾವರ: ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವನ್ನು ಕಡಿದ ಘಟನೆಗೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಳೆದ 1 ತಿಂಗಳಲ್ಲಿ ಮೇಯಲು ಬಿಟ್ಟಿದ್ದ 15 ಹಸುಗಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಹಸುವಿನ ರುಂಡ ಕಡಿದು ದೇಹದ ಭಾಗವನ್ನು ದುಷ್ಕರ್ಮಿಗಳು ಹೊತ್ತೊಯ್ದ ಘಟನೆ ನಡೆದಿದ್ದು, ಮಾಂಸ ಭಕ್ಷಣೆಗಾಗಿ ಈ ಕೃತ್ಯವೆಸಗಿರುವ ಅನುಮಾನ ವ್ಯಕ್ತವಾಗಿದೆ.
ಈ ಘಟನೆ ಬೆನ್ನಲ್ಲೇ ಗ್ರಾಮದಲ್ಲಿ ಕಳೆದ 1 ತಿಂಗಳಿದ ಮೇಯಲು ಬಿಟ್ಟಿದ್ದ 15 ಹಸುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಚಿರತೆ ಹೊತ್ತೊಯ್ದಿರಬಹುದು ಎಂದು ಗ್ರಾಮಸ್ಥರು ಸುಮ್ಮನಾಗಿದ್ದರು. ಆದರೆ ಇಂದು ಕೃಷ್ಣ ಆಚಾರ್ ಎಂಬುವವರ ಹಸುವನ್ನು ದುಷ್ಕರ್ಮಿಗಳು ಕಡಿದು, ರುಂಡ ಬೇರ್ಪಡಿಸಿ ಕಾಲು ಕತ್ತರಿಸಿ ದೇಹವನ್ನು ಕೊಂಡೊಯ್ದಿರುವ ಘಟನೆ ತಿಳಿಯುತ್ತಿದ್ದಂತೆ ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರು ತಪ್ಪಿತಸ್ಥರನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಬೇಕು, ನಮಗೆ ಹಾಗೂ ದನಕರುಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.