ಬೆಂಗಳೂರು: ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿದೆ.
ಆಸೀಫ್ ಹಲ್ಲೆ ನಡೆಸಿರುವ ವ್ಯಕ್ತಿ. ಪತ್ನಿ ಮೇಲಿನ ಅನುಮಾನಕ್ಕೆ ಪತ್ನಿ ಹಾಗೂ ಪತ್ನಿ ತಾಯಿ ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪತ್ನಿ ಹೀನಾ ಕೌಸರ್ ಹಾಗೂ ಫರ್ವೀನ್ ತಾಜ್ ಹಲ್ಲೆಗೊಳಗಾದವರು.
ತಲ್ವಾರ್ ನಿಂದ ಹಲ್ಲೆ ನಡೆಸಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್ ಜೊತೆ ಹೀನಾ ಕೌಸರ್ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಷ್ಟಾಗ್ಯೂ ವರ್ಷದ ಹಿಂದೆ ಆಸೀಫ್ ಪರಸ್ತ್ರೀ ಸಹವಾಸ ಮಾಡಿ ಪತ್ನಿ ಹಾಗೂ ಅತ್ತೆಗೆ ಚಿತ್ರಹಿಂಸೆ ಕೊಡುತ್ತಿದ್ದ. ತಾನು ಮಾಡಿದ್ದ ತಪ್ಪನ್ನು ಪತ್ನಿ ಮೇಲೆ ಆರೋಪ ಮಡುತ್ತಿದ್ದ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಇಲ್ಲಸಲ್ಲದ ಕಥೆಕಟ್ಟುತ್ತಿದ್ದ. ಪತಿಯ ಕಾಟಕ್ಕೆ ಬೇಸತ್ತ ಹೀನಾ ಕೌಸರ್ ಮಗಳ ಜೊತೆ ತವರು ಮನೆಸೇರಿದ್ದಳು. ಜೀವನ ನಡೆಸಲು ಕೆಲಸಕ್ಕೆಸೇರಿದ್ದರು. ಆದರೂ ಸುಮ್ಮನಾಗದ ಪತಿ ಮಹಾಶಯ ಮತ್ತೆ ಪತ್ನಿ ತವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಸಂಶಯ ವ್ಯಕ್ತಪಡಿಸಿ ಪತ್ನಿ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ತಪ್ಪಿಸಲು ಬಂದ ಅತ್ತೆಯ ಮೇಲೂ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ತಾಯಿ-ಮಗಳು ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.