ನವದೆಹಲಿ: ಸರ್ಕಾರಿ ಸ್ವಾಮ್ಯದ ಬೃಹತ್ ಕಂಪನಿಯಾದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC) ಯೊಂದಿಗೆ ಕುದುರೆಮುಖ ಕಬ್ಬಿಣ ಅದಿರು ಕಂಪನಿಯನ್ನು(KIOCL) ವಿಲೀನ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಆರ್ಥಿಕವಾಗಿ ಕೆಐಒಸಿಎಲ್ ತೀವ್ರ ನಷ್ಟದಲ್ಲಿರುವುದರಿಂದ ವಿಲೀನ ಮಾಡುವುದು ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಹಕಾರ ಕೂಡ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.
ಉಕ್ಕು ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಕೆಐಒಸಿಎಲ್ ವಾರ್ಷಿಕ 3.5 ದಶಲಕ್ಷ ಟನ್ ಸಾಮರ್ಥ್ಯದ ಕಬ್ಬಿಣ ಆಕ್ಸೈಡ್ ಗುಳಿಗೆ ಉತ್ಪಾದನಾ ಘಟಕ ನಿರ್ವಹಿಸುತ್ತಿದೆ. ಮಂಗಳೂರಿನಲ್ಲಿ ವಾರ್ಷಿಕ 2.16 ಲಕ್ಷ ಟನ್ ಪಿಗ್ ಐರನ್ ತಯಾರಿಸುವ ಬ್ಲಾಸ್ಟ್ ಫರ್ನೇಸ್ ಘಟಕವನ್ನು ಕೆಐಒಸಿಎಲ್ ನಿರ್ವಹಿಸುತ್ತಿದೆ.
ಎನ್.ಎಂ.ಡಿ.ಸಿ. ಕೂಡ ಉಕ್ಕು ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಶೇಕಡ 20ರಷ್ಟು ಕಬ್ಬಿಣದ ಅದಿರು ಬೇಡಿಕೆಯನ್ನು ಪೂರೈಸುತ್ತಿದೆ. ಎನ್.ಎಂ.ಡಿ.ಸಿ.ಯಲ್ಲಿ ಕೆಐಒಸಿಎಲ್ ವಿಲೀನಕ್ಕೆ ಈಗಾಗಲೇ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗಿದೆ.