ಚಿತ್ರದುರ್ಗ: ಬಿಜೆಪಿ ಮತ್ತು ಜೆಡಿಎಸ್ ಪಕ್ಷದ 25 ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಶೀಘ್ರವೇ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಶನಿವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಯಾವ ಕ್ಷಣದಲ್ಲಾದರೂ ರಾಜೀನಾಮೆ ನೀಡಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಎಷ್ಟು ದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇರುತ್ತಾರೆ. ಅವರ ಕುರ್ಚಿಯ ನಾಲ್ಕು ಕಾಲುಗಳಲ್ಲಿ ಮೂರು ಈಗಾಗಲೇ ಮುರಿದಿವೆ. ಒಂದೇ ಕಾಲಿನಲ್ಲಿ ಅವರ ಕುರ್ಚಿ ನಿಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಕೆಲವು ಶಾಸಕರು ಈಗಾಗಲೇ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದು, ಜೆಡಿಎಸ್ ನಿಂದಲೂ ದೊಡ್ಡ ತಂಡ ಕಾಂಗ್ರೆಸ್ ಗೆ ಬರಲಿದೆ. ಹೀಗಿರುವಾಗ ರಮೇಶ ಜಾರಕಿಹೊಳಿಯವರು ಕಾಂಗ್ರೆಸ್ ಪಕ್ಷದ 60 ಶಾಸಕರನ್ನು ಬಿಜೆಪಿಗೆ ಕರೆದೊಯ್ಯುತ್ತಾರೆ ಎನ್ನುವುದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.