ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹೊಸ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಕೆಲವು ತೆರಿಗೆಗಳನ್ನು ಹೆಚ್ಚಳ ಮಾಡಿ ವಾಹನ ಖರೀದಿದಾರರ ಮೇಲೆ ಹೊರೆ ಹೇರಿರುವ ಸರ್ಕಾರ ಫೆಬ್ರವರಿ 1ರಿಂದ ಹೊಸದಾಗಿ ಉಪ ಕರ ವಿಧಿಸಲು ಮುಂದಾಗಿದೆ.
ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸಿದ್ದು, ಮಂಡಳಿ ಯೋಜನೆಗೆ ಅಗತ್ಯವಿರುವ ಹಣವನ್ನು ಉಪ ಕರದ ಮೂಲಕ ಸಾರ್ವಜನಿಕರಿಂದ ವಸೂಲಿ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ ಕಾಯ್ದೆಗೆ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ತರಲಾಗಿದೆ.
ಫೆಬ್ರವರಿ 1ರಿಂದ ನೋಂದಣಿಯಾಗುವ ದ್ವಿಚಕ್ರ ಮತ್ತು ಸಾರಿಗೇತರ ಮೋಟಾರ್ ಕಾರ್ ಗಳಿಗೆ ಹೆಚ್ಚುವರಿ ಉಪ ಕರ ವಿಧಿಸಲಾಗುವುದು. ದ್ವಿಚಕ್ರ ವಾಹನಗಳ ನೋಂದಣಿಗೆ 500 ರೂಪಾಯಿ, ಸಾರಿಗೇತರ ಮೋಟಾರು ಕಾರ್ ಗಳಿಗೆ ಒಂದು ಸಾವಿರ ರೂಪಾಯಿ ಉಪ ಕರ ವಿಧಿಸಲಿದ್ದು, ಸಂಗ್ರಹವಾಗುವ ಮೊತ್ತವನ್ನು ಚಾಲಕರು ಸೇರಿ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಲಾಗುವುದು. ಈ ಹಣವನ್ನು ಚಾಲಕರು ಮತ್ತು ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಮಿಕರ ಆರೋಗ್ಯ, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ವ್ಯಯ ಮಾಡಲಾಗುತ್ತದೆ ಎಂದು ಹೇಳಲಾಗಿದೆ.