ಬೆಳಗಾವಿ: ಸಾಲ ಮರುಪಾವತಿ ಮಾಡಿಲ್ಲ ಎಂದು ಅಪ್ರಾಪ್ತ ಬಾಲಕಿಯನ್ನೇ ವಿವಾವಹಾಗಿದ್ದ ಕಿರಾತಕನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ವಿಶಾಲ್ ಡವಳಿ ಬಂಧಿತ ಆರೋಪಿ. ಬೆಳಗಾವಿಯ ಟಿಳಕವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಿಶಾಲ್ ಡವಳಿ ಜೊತೆ ಆತನ ತಾಯಿ ರೇಖಾ ಡವಳಿಯನ್ನು ಬಂಧಿಸಲಾಗಿದೆ.
ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ 17 ವರ್ಷದ ಬಾಲಕಿ ಅನಾರೋಗ್ಯವೆಂದು ತಾಯಿ ಜೊತೆ ಬೆಳಗಾವಿಯಲ್ಲಿ ವಾಸವಾಗಿದ್ದಳು. ಮಗಳ ಆಸ್ಪತ್ರೆ ಖರ್ಚಿಗೆಂದು ಬಲಕಿಯ ತಾಯಿ ಬೆಳಗಾವಿಯ ಮಂಗಾಯಿ ನಗರದ ವಡಗಾಂವ್ ನಿವಾಸಿ ಆರೋಪಿ ರೇಖಾ ಪುಂದಲಿಕ ಡವಳಿ ಬಳಿ 50 ಸಾವಿರ ಹಣ ಪಡೆದಿದ್ದರು. ಹಣ ವಾಪಾಸ್ ಕೊಡಲು ಸಾಧ್ಯವಾಗದಿದ್ದಾಗ ತನ್ನ ಬಂಗಾರದ ಕಿವಿಯೋಲೆಗಳನ್ನು ಆರೋಪಿಗಳಿಗೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ, ನನ್ನ ಮಗ ವಿಶಾಲ್ ನಿಗೆ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾಳೆ.
ಬಾಲಕಿ ತಾಯಿ ಒಪ್ಪಿಲ್ಲ, ಬಾಲಕಿಯೂ ಮದುವೆಗೆ ಒಪ್ಪಿಲ್ಲ. ನಾನು ಶಾಲೆಗೆ ಹೋಗುತ್ತೇನೆ ಮದುವೆ ಬೇಡ ಎಂದು ಪಟ್ಟು ಹಿಡಿದಿದ್ದಳು. ಆದರೂ ನ.17ರಂದು ಬಾಲಕಿ ಮನೆಗೆ ಆರೋಪಿ ರೇಖಾ, ಮಗ ವಿಶಾಲ್, ಆತನ ಅಣ್ಣ ಶ್ಯಾಮ್, ಚಿಕ್ಕಮ್ಮ ಸೇರಿ ನಾಲ್ವರು ಬಾಲಕಿ ಮನೆಗೆ ಹೋಗಿ ಬಾಲಕಿಯನ್ನು ಬಲವಂತದಿಂದ ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆತಂದು ಮಾರನೆ ದಿನ ಬೆಳಿಗ್ಗೆ ಅಥಣಿಗೆ ಕರೆದೊಯ್ದು ಮುಂಜಾನೆ 5ಗಂಟೆಗೆ ವಿಶಾಲ್ ನಿಗೆ ಬಾಲಕಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಬಾಲಕಿಯನ್ನು ಬಲವಂತದಿಂದ ಮನೆಗೆ ಕರೆತಂದಿದ್ದಾರೆ. ಮದುವೆಯಾದ ದಿನದಿಂದ ಬಾಲಕಿ ಮೇಲೆ ಬಲವಂತದಿಂದ ಲೈಂಗಿಕ ದೌರ್ಜನ್ಯ, ಕಿರುಕುಳ, ದೈಹಿಕ ಸಂಪರ್ಕ ಹೊಂದಿ, ಚಿತ್ರಹಿಂಸೆ ನೀಡಿದ್ದಾನೆ. ಹಲವು ತಿಂಗಳ ಬಳಿಕ ಹೇಗೋ ಅವರಿಂದ ತಪ್ಪಿಸಿಕೊಂಡು ಬಂದ ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಬಾಲಕಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿಶಾಲ್ ಹಾಗೂ ತಾಯಿ ರೇಖಾಳನ್ನು ಬಂಧಿಸಲಾಗಿದೆ.