ಉತ್ತರ ಪ್ರದೇಶದ ಮೀರತ್ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ತನ್ನ ವಿವಾಹಕ್ಕೆ ಕೇವಲ ಎರಡು ದಿನಗಳಾಗಿದ್ದಾಗಲೇ ತನ್ನ ಪ್ರೇಮಿ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತರನ್ನು ಬವನ್ಪುರ ಗ್ರಾಮದ ಸೋನಾಲಿ ಸೇನ್ (23) ಮತ್ತು ಅತ್ರಾಂಡಾ ಗ್ರಾಮದ ಶಿವಂ ತ್ಯಾಗಿ (24) ಎಂದು ಗುರುತಿಸಲಾಗಿದೆ. ಸೋನಾಲಿ ಹಾಪುರದ ಒಂದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಶಿವಂ ಹಾರ್ಡ್ವೇರ್ ಅಂಗಡಿಯ ಮಾಲೀಕರಾಗಿದ್ದರು.
ಪೊಲೀಸರ ಪ್ರಕಾರ, ಈ ಇಬ್ಬರು ಮೂರು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ಆದರೆ ವಿಭಿನ್ನ ಜಾತಿಗಳಿಗೆ ಸೇರಿದ್ದರಿಂದ ಅವರ ಪ್ರೇಮಕ್ಕೆ ಕುಟುಂಬಸ್ಥರಿಂದ ತೀವ್ರ ವಿರೋಧ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮನನೊಂದ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ಘಟನೆಯಿಂದಾಗಿ ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ. ಜಾತಿಯ ಹೆಸರಿನಲ್ಲಿ ಪ್ರೀತಿಯನ್ನು ಕೊಲ್ಲಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.