ಬೆಂಗಳೂರು: ಇದೇ ಮೊದಲ ಬಾರಿಗೆ ಸಿಇಟಿ, ಪಿಜಿಸಿಇಟಿ, ಡಿಸಿಇಟಿ ಸೇರಿದಂತೆ 5 ಪ್ರವೇಶ ಪರೀಕ್ಷೆಗಳಿಗೆ ಸರ್ಕಾರ ಏಕಕಾಲದಲ್ಲಿ ದಿನಾಂಕ ಪ್ರಕಟಿಸಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು 2025 ನೇ ಸಾಲಿನ ಸಿಇಟಿ ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ, ದಾಖಲೆ ಪರಿಶೀಲನೆಗಳ ಕುರಿತಾಗಿ ಮಾಹಿತಿ ನೀಡಿದ್ದಾರೆ.
ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ, ಬಿ ಫಾರ್ಮಾ, ಕೃಷಿ ವಿಜ್ಞಾನ ಕೋರ್ಸ್, ಬಿಎಸ್ಸಿ ನರ್ಸಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಏಪ್ರಿಲ್ 16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಸಲಾಗುವುದು. ಜನವರಿ 23ರಿಂದ ಫೆಬ್ರವರಿ 21ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಏ. 16ರಂದು ಬೆಳಗ್ಗೆ 10.30ರಿಂದ ಭೌತ ವಿಜ್ಞಾನ, ಮಧ್ಯಾಹ್ನ 2.30ರಿಂದ ರಸಾಯನ ವಿಜ್ಞಾನ, ಏಪ್ರಿಲ್ 17ರಂದು ಬೆಳಿಗ್ಗೆ ಗಣಿತ, ಮಧ್ಯಾಹ್ನ ಜೀವವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 18ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು.
ಅರ್ಜಿ ಎಲ್ಲಾ ಕೋರ್ಸುಗಳಿಗೆ ಸಾಮಾನ್ಯವಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ, ಹಾಗೂ ಆರ್ಕಿಟೆಕ್ಚರ್ ಗಳ ಪ್ರವೇಶಾತಿಗೂ ನೋಂದಣಿ ಶುಲ್ಕ ಪಾವತಿ ಕಡ್ಡಾಯವಾಗಿದೆ.
ಎಂಇ, ಎಂಟೆಕ್, ಎಂ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ಪಿಜಿ ಡಿಪ್ಲೋಮೋ ಪಾಸಾದವರಿಗೆ ಇಂಜಿನಿಯರಿಂಗ್ ಎರಡನೇ ವರ್ಷ ಅಥವಾ ಮೂರನೇ ಸೆಮಿಸ್ಟರ್ ಗೆ ನೇರ ಪ್ರವೇಶಕ್ಕೆ ಡಿಸಿಇಟಿ ಪರೀಕ್ಷೆಯನ್ನು ಮೇ 31 ರಂದು ನಡೆಸಲಾಗುವುದು. ಏಪ್ರಿಲ್ 24 ರಿಂದ ಮೇ 10ರವರೆಗೆ ಅರ್ಜಿ ಸಲ್ಲಿಸಬಹುದು.
ಎಂಸಿಎ ಮತ್ತು ಎಂಬಿಎ ಕೋರ್ಸುಗಳ ಪ್ರವೇಶಕ್ಕೆ, ಎಂ ಫಾರ್ಮಾ ಮತ್ತು ಫಾರ್ಮಾ ಡಿ ಕೋರ್ಸ್ ಗಳ ಪ್ರವೇಶಕ್ಕೆ ಜೂನ್ 22 ರಂದು ಪ್ರತ್ಯೇಕ ಪರೀಕ್ಷೆ ನಡೆಸಲಿದ್ದು, ಏಪ್ರಿಲ್ 24 ರಿಂದ ಜೂನ್ 10 ರವರೆಗೆ ಕಾಲಾವಕಾಶ ಇರುತ್ತದೆ.
ಸೀಟ್ ಬ್ಲಾಕಿಂಗ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಒಂದು ಅರ್ಜಿಗೆ ಒಂದು ಮೊಬೈಲ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಅದೇ ಸಂಖ್ಯೆಗೆ ಬರುವ ಒಟಿಪಿ ದೃಢೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಸಾಧ್ಯವಾಗಲಿದೆ. ಪರೀಕ್ಷೆಯ ದಿನಾಂಕ, ಸೂಚನೆ, ಸೀಟು ಹಂಚಿಕೆ, ಪ್ರವೇಶ ಸೇರಿ ಎಲ್ಲಾ ಮಾಹಿತಿಗಳನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು ಎನ್ನಲಾಗಿದೆ.