ಬೆಂಗಳೂರು: ಕಿಯೋನಿಕ್ಸ್ ನಲ್ಲಿ ನೂರಾರು ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿದೆ. ಈ ಬಗ್ಗೆ ತನಿಖಾ ಸಮಿತಿ ವಿಚಾರಣೆ ನಡೆಸುತ್ತಿರುವುದರಿಂದ ವೆಂಡರ್ ಗಳ ಬಿಲ್ ನೀಡಿಕೆ ವಿಳಂಬವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಿಯೋನಿಕ್ಸ್ ವೆಂಡರ್ ಗಳ ಬ್ಲಾಕ್ಮೇಲ್ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮಾನದಂಡಗಳಿಲ್ಲದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 300 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ ಎಂದು ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮಹೇಶ್ವರರಾವ್ ಅವರ ಸಮಿತಿ ವಿಚಾರಣೆ ನಡೆಸುತ್ತಿದೆ. ಪ್ರಾಥಮಿಕ ವರದಿ ಬಂದಿದ್ದು, ಅಂತಿಮ ವರದಿಗೆ ಕಾಯುತ್ತಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸುವುದನ್ನು ಕಿರುಕುಳ ಎಂದು ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಬಾಕಿ ಬಿಲ್ ಪಾವತಿಸದೆ ನಿತ್ಯ ಕಿರುಕುಳ ನೀಡಿ 450ರಿಂದ 500 ಮಂದಿ ವೆಂಡರ್ ಗಳ ಜೊತೆಗೆ ಕೆಲಸ ಮಾಡುವ 6,000ಕ್ಕೂ ಹೆಚ್ಚು ಕುಟುಂಬಗಳನ್ನು ಸರ್ವನಾಶ ಮಾಡಿದ್ದು, ಎಲ್ಲರಿಗೂ ಒಂದೇ ಬಾರಿಗೆ ಸಾಯಲು ದಯಾಮರಣ ನೀಡಿ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಹಿಂದಿನ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವೆಂಡರ್ ಗಳು ಬ್ಲಾಕ್ ಮೇಲ್ ಮಾಡುವುದು ಎಷ್ಟು ಸರಿ? ಕೆಲವರಿಗೆ ತೊಂದರೆಯಾದರೂ ನಿಯಮ ಪಾಲಿಸಲೇಬೇಕಿದೆ. ಸಂಕಷ್ಟ ಇದೆ ಎಂದಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.