ಕೋಲಾರ: ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಂದ ಒತ್ತುವರಿ ಆಗಿದೆ ಎನ್ನಲಾಗಿರುವ ಅರಣ್ಯ ಜಮೀನಿನ ಜಂಟಿ ಸರ್ವೆ ಕಾರ್ಯ ಇಂದು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದುವರೆಗೆ ಜಂಟಿ ಸರ್ವೆ ಕಾರ್ಯವನ್ನು ಮೂರು ಬಾರಿ ಮುಂದೂಡಲಾಗಿತ್ತು. ಜನವರಿ 15ರಂದು ಜಂಟಿ ಸರ್ವೆ ಕಾರ್ಯ ನಡೆಸುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಹಾಯಕ ಆಯುಕ್ತ ಡಾ.ಹೆಚ್.ಪಿ.ಎಸ್. ಮೈತ್ರಿ ನೇತೃತ್ವದಲ್ಲಿ ಮಂಗಳವಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆ ಅರಣ್ಯ ವಲಯಕ್ಕೆ ಸೇರಿದ ಹೊಸಹುಡ್ಕ ಸರ್ವೇ ನಂಬರ್ 1 ಹಾಗೂ 2ರಲ್ಲಿನ 61.39 ಎಕರೆ ಅರಣ್ಯ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 9:30ಕ್ಕೆ ಸರ್ವೆಗೆ ಸಮಯ ನಿಗದಿ ಮಾಡಲಾಗಿದ್ದು, ರಮೇಶ್ ಕುಮಾರ್ ಅವರಿಗೂ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.