ಬೆಂಗಳೂರು : ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರ ಮೂಲಕ ಶೇಖ್ ನಸ್ರೂ (35) ಎಂದು ಗುರುತಿಸಲಾಗಿದೆ. ಈತ ಪ್ಲಾಸ್ಟಿಕ್ ಹಾಗೂ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಮದ್ಯದ ನಶೆಯಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ.
ಆರೋಪಿಯನ್ನು ಜ.24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ಮೂರು ಹಸುಗಳ ಕೆಚ್ಚಲನ್ನು ಕೊಯ್ದ ದುಷ್ಕರ್ಮಿಗಳ ವಿರುದ್ಧ ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನೆ ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದರು. ಕೃತ್ಯದ ಬಗ್ಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ನಡುವೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಣಿಹಿಂಸಾ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದರು.