ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ನಲ್ಲಿ ಈ ಘಟನೆ ನಡೆದಿದೆ. ಹದಿಹರೆಯದ ಹುಡುಗನ ಸ್ಮಾರ್ಟ್ಫೋನ್ ಆಸೆ ಮತ್ತು ಮೊಬೈಲ್ ಖರೀದಿಸಲು ಅವನ ಬಡ ತಂದೆಯ ಅಸಮರ್ಥತೆಯು ತಂದೆ-ಮಗನ ಜೀವವನ್ನು ಬಲಿ ತೆಗೆದುಕೊಂಡಿದೆ.ಬಿಲೋಲಿ ತಹಸಿಲ್ನ ಮಿನಾಕಿಯಲ್ಲಿರುವ 16 ವರ್ಷದ ಹತ್ತನೇ ತರಗತಿ ಬಾಲಕ ಮತ್ತು ಅವನ ರೈತ ತಂದೆ ಗುರುವಾರ ತಮ್ಮ ಕುಟುಂಬದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತನ್ನ ಮಗ ಮರಕ್ಕೆ ನೇಣು ಬಿಗಿದಿರುವುದನ್ನು ನೋಡಿದಾಗ ಆತ ಕೂಡ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಂದೇಡ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತ ಮಗ ಓಂಕಾರ್ ಮೂವರು ಸಹೋದರರಲ್ಲಿ ಕಿರಿಯವನಾಗಿದ್ದು, ಮಕರ ಸಂಕ್ರಾಂತಿಯನ್ನು ಆಚರಿಸಲು ಲಾತೂರ್ ಜಿಲ್ಲೆಯ ಉದ್ಗಿರ್ನಲ್ಲಿರುವ ತನ್ನ ಹಾಸ್ಟೆಲ್ನಿಂದ ಮನೆಗೆ ಮರಳಿದ್ದನು. ವರದಿಯ ಪ್ರಕಾರ, ಓಂಕಾರ್ ತನ್ನ ತಂದೆಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್ಫೋನ್ ಕೊಡಿಸುವಂತೆ ವಿನಂತಿಸಿದ್ದರು. ಆದರೆ ಹಣಕಾಸಿನ ಸಮಸ್ಯೆಯಿಂದ ತಂದೆ ಮಗನಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಲಿಲ್ಲ.ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್ಪೆಕ್ಟರ್ ದಿಲೀಪ್ ಮುಂಡೆ, ಓಂಕಾರ್ ಅವರ ತಾಯಿಯ ಪ್ರಕಾರ, ಮಗ ತನ್ನ ತಂದೆಗೆ ಮೊಬೈಲ್ ಕೊಡಿಸಲು ನಿರಂತರವಾಗಿ ಕೇಳುತ್ತಿದ್ದನು ಎಂದು ಹೇಳಿದರು. “ಓಂಕಾರ್ ಬುಧವಾರ ಸಂಜೆ ಮತ್ತೆ ಈ ವಿಷಯವನ್ನು ಎತ್ತಿದ್ದಾನೆ. ಆದರೆ ಅವರ ತಂದೆ ಕೃಷಿ ಮತ್ತು ವಾಹನಕ್ಕಾಗಿ ತೆಗೆದುಕೊಂಡ ಸಾಲವನ್ನು ಕಟ್ಟುತ್ತಿದ್ದರಿಂದ ಮೊಬೈಲ್ ಖರೀದಿಸಲು ಆಗಲ್ಲ ಎಂದಿದ್ದರು.