ನವದೆಹಲಿ : ದೆಹಲಿಯ ಶಾಲೆಗಳಿಗೆ 23 ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ 12 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಧಾನಿಯ ವಿವಿಧ ಶಾಲೆಗಳಿಗೆ ಕಳುಹಿಸಲಾದ ಕೊನೆಯ 23 ಬಾಂಬ್ ಬೆದರಿಕೆ ಇಮೇಲ್ಗಳು 12 ನೇ ತರಗತಿಯ ವಿದ್ಯಾರ್ಥಿ ಕಳುಹಿಸಿದ್ದಾನೆ ಎಂದು ಪೊಲೀಸರು ಇಂದು ಬಹಿರಂಗಪಡಿಸಿದ್ದಾರೆ. ವಿಚಾರಣೆ ವೇಳೆ ತಾನೇ ಬೆದರಿಕೆಯೊಡ್ಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ಅವರ ಪ್ರಕಾರ, ವಿಚಾರಣೆಯ ಸಮಯದಲ್ಲಿ, ವಿದ್ಯಾರ್ಥಿ ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇತ್ತೀಚೆಗೆ ಕಳೆದ ಕೆಲವು ತಿಂಗಳಿನಿಂದ ದೆಹಲಿಯ ಹಲವು ಶಾಲೆಗಳಿಗೆ ಸಾಲು ಸಾಲು ಬಾಂಬ್ ಬೆದರಿಕೆ ಸಂದೇಶ ಬರುತ್ತಿತ್ತು. ಘಟನೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಿದ ಪೊಲೀಸರಿಗೆ ಇದೀಗ ಶಾಕ್ ಎದುರಾಗಿದ್ದು, ತಾನೇ ಬಾಂಬ್ ಬೆದರಿಕೆ ಹಾಕಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ದೆಹಲಿಯ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದನು ಎಂದು ತಿಳಿದು ಬಂದಿದೆ.