ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮೂರು ಗ್ರಾಮಗಳ ಹಲವಾರು ಜನರಲ್ಲಿ ಹಠಾತ್ ಕೂದಲು ಉದುರುವಿಕೆ ಕಂಡು ಬಂದಿದ್ದು, ಕೆಲವೇ ದಿನಗಳಲ್ಲಿ ತಲೆ ಬೋಳು ಉಂಟಾಗಿದೆ.
ಹಳ್ಳಿಗರಲ್ಲಿ ಕೂದಲು ಉದುರುವಿಕೆಯ ಹಠಾತ್ ಹೆಚ್ಚಳ ಹಿನ್ನಲೆಯಲ್ಲಿ ಮಾಲಿನ್ಯವಿರಬಹುದೆಂದು ಅಧಿಕಾರಿಗಳು ಸ್ಥಳೀಯ ನೀರಿನ ಮೂಲಗಳ ಪರೀಕ್ಷೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಂಡ ಮಂಗಳವಾರ ಈ ಗ್ರಾಮಗಳಲ್ಲಿ ಸಮೀಕ್ಷೆ ಆರಂಭಿಸಿದೆ. ವರದಿಯ ಪ್ರಕಾರ, ಆರೋಗ್ಯ ಇಲಾಖೆಯು ಪೀಡಿತ ಜನರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಿದೆ.
ಜಿಲ್ಲಾ ಪರಿಷತ್ನ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಶೇಗಾಂವ್ ತಾಲೂಕಿನ ಕಲ್ವಾಡ್, ಬೋಂಡಗಾಂವ್ ಮತ್ತು ಹಿಂಗ್ನಾ ಗ್ರಾಮಗಳ ಸುಮಾರು 30 ಜನರು ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ.
ರೋಗ ಲಕ್ಷಣಗಳ ಪ್ರಕಾರ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಇಲಾಖೆ ಮುಂದಾಗಿದೆ. ತ್ವಚೆ ತಜ್ಞರ ಸಲಹೆಯನ್ನೂ ಪಡೆಯಲಾಗುತ್ತಿದೆ. ಸಂಭವನೀಯ ಮಾಲಿನ್ಯವನ್ನು ಪರೀಕ್ಷಿಸಲು ಈ ಗ್ರಾಮಗಳ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪರಿಷತ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.