ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಿಯಂರಿಸಲು ಮುಂದಾದರೆ ತಮ್ಮ ಕುರ್ಚಿಗೆ ಧಕ್ಕೆಯಾಗುತ್ತದೆ ಎಂಬ ಆತಂಕದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಈ ಸರ್ಕಾರ ಎಲ್ಲದರಲ್ಲಿ ಕಮೀಷನ್, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯುಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ಎಸ್ಸಿ, ಎಸ್ಟಿ ಬೋರ್ ವೆಲ್ ಗಳಿಗೂ ಕಮೀಷನ್ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ ಎಂದರು.
ಭ್ರಷ್ಟಾಚಾರವನ್ನು ಸಿಎಂ ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈ ತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮೀಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟಿಂಗ್ ಗಳು ಅವರ ಆಂತರಿಕ ವಿಚಾರ, ಈ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ. ಆದರೆ, ಆಡಳಿತ ಯಂತ್ರ ಕುಸಿದಿದೆ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ. ತಾಯಂದಿರು ಸಾಯುತ್ತಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸರಿಯಾಗಿ ದೊರೆಯುತ್ತಿಲ್ಲ. ಅಂಗನಾವಡಿ ಕಾರ್ಯಕರ್ತರು ಸರಿಯಾಗಿ ಗೌರವಧನ ಪಡೆಯುತ್ತಿಲ್ಲ. ನಾವು ಪ್ರತಿಪಕ್ಷವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ದೆಹಲಿಯಲ್ಲಿ ಮಹಿಳೆಯರಿಗೆ ಪ್ಯಾರಿ ದೀದಿ ಯೋಜನೆ ಘೋಷಣೆ ಮಾಡಿರುವುದರಿಂದ ಅಲ್ಲಿನ ಜನರು ನಂಬುವುದಿಲ್ಲ. ಈಗಾಗಲೇ ಗ್ಯಾರೆಂಟಿ ಹೆಸರಿನಲ್ಲಿ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕವನ್ನು ದಿವಾಳಿ ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ದೆಹಲಿಯನ್ನೂ ದಿವಾಳಿ ಮಾಡುತ್ತಾರೆ. ಹೀಗಾಗಿ ಜನರು ಕಾಂಗ್ರೆಸನ್ನು ನಂಬುವುದಿಲ್ಲ ಎಂದರು.