ನವದೆಹಲಿ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ 60% ಕಮೀಶನ್ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದಾಖಲೆ ಕೊಡಿ, ದಾಖಲೆ ಕೊಡಿ ಎನ್ನುವ ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಲೂಟಿಗಳಿಗೆ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರೇ.. ನಿಮ್ಮ ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿ ಸಾಕ್ಷಿಗುಡ್ಡೆ. ಪತ್ರಿಕೆಯವರೇ ನಿಮ್ಮ ಸಾಕ್ಷಿಗುಡ್ಡೆಯ ಸಾಕ್ಷಾತ್ಕಾರ ಮಾಡಿಸಿದ್ದಾರೆ!! ನಿಮ್ಮ ಸರಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ..? ಎಂದು ಪ್ರಶ್ನಿಸಿದ್ದಾರೆ.
ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ. ಗುತ್ತಿಗೆದಾರರ ₹32,000 ಕೋಟಿಯಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್ ಕರಿನೆರಳು ಕೂಡ ಬಿದ್ದಿದೆ! ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ!! ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ಬಿಲ್ ಬಾಕಿ ಪಟ್ಟಿ ನೋಡಿ.. ಜಲ ಸಂಪನ್ಮೂಲ: ₹14,600 ಕೋಟಿ, ಲೋಕೋಪಯೋಗಿ: ₹10,000 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: ₹3,100 ಕೋಟಿ, ಸಣ್ಣ ನೀರಾವರಿ: ₹2,800 ಕೋಟಿ, ಇತರೆ ಇಲಾಖೆ: ₹1,500 ಕೋಟಿ ಸೇರಿ ಒಟ್ಟು: ₹32,000 ಕೋಟಿ ಬಾಕಿ ಇದೆ. ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ ಎಂದು ಹೆಚ್.ಡಿ.ಕೆ ತಿಳಿಸಿದ್ದಾರೆ.