ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರತಿ ಕ್ವಾರಿ, ಕ್ರಷರ್, ಗಣಿಗಳಿಂದ ತಲಾ 10 ಲಕ್ಷ ರೂಪಾಯಿ ಪಡೆದಿದ್ದು, 12 ಕೊತಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸುಧಾಕರ್, ಹೊಸವರ್ಷದ ಗಿಫ್ಟ್ ಎಂದು ಶಾಸಕ ಪ್ರದೀಪ್ ಈಶ್ವರ್, ಕ್ವಾರಿ, ಕ್ರಷರ್ ಗಳಿಂದ ತಲಾ 10 ಲಕ್ಷ ಹಣ ಪಡೆದಿದ್ದಾರೆ. ಭಾಷಣದಲ್ಲಿ ಮಾತನಾಡುವುದು ಒಂದು , ಮಾಡುವುದು ಒಂದು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ಜಿಲೆಯಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲವೇ? ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಣವಿಲ್ಲದೇ ಏನೂ ನಡೆಯುತ್ತಿಲ್ಲ. ಭ್ರಷ್ಟಾಚಾರ ಹೆಚ್ಚುತ್ತಿದೆ. ಅಧಿಕಾರಿಗಳ ವರ್ಗಾವಣೆಗೂ ಹಣ ಪಡೆಯಲಾಗುತ್ತಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯ ಒಂದು ಕೊಳವೆ ಬಾವಿ ಕೊರೆಯಲು 30 ಸಾವಿರ ಕೊಡಿ ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾಪಂಚಾಯಿತಿ ಸಿಇಒಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಟನ್ ಗಟ್ಟಲೇ ಗಾಂಜಾ ಪೂರೈಕೆಯಾಗುತ್ತಿದೆ. ಪೊಲೀಸ್ ಇಲಾಖೆ ಸಹಕಾರ ಇಲ್ಲದೇ ಜಿಲ್ಲೆಗೆ ಗಾಂಜಾ ಬರಲು ಸಾಧ್ಯವೇ? ಎಂದು ಪ್ರಶ್ನಿಸಿದರು.