ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸದನದಲ್ಲಿ ಅವಮಾನಿಸಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ಜನವರಿ 7ರಂದು ಮೈಸೂರು ಬಂದ್ ಗೆ ಕರೆ ನೀಡಲಾಗಿದೆ.
ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ಮೈಸೂರು ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಪುರಭವನ ಆವರಣದಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4ರ ವರೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ಪ್ರತಿಭಟನೆಗೆ ಕರೆ ನೀಡಿದೆ. ಮೈಸೂರು ಬಂದ್ ಗೆ ಉದ್ಯಮಿಗಳು, ಪೌರಕಾರ್ಮಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಬೆಂಬಲ ನೀಡಿದ್ದಾರೆ. ಲಾರಿ ಮಾಲೀಕರು, ಆಟೋ, ಕ್ಯಾಬ್, ಟೆಂಪೋ ಮಾಲೀಕರು ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.
ಜಿಲ್ಲಾ ಕಾಂಗ್ರೆಸ್ ಕೂಡ ಬಂದ್ ಗೆ ಬೆಂಬಲ ನೀಡಿದೆ. ಕಾಂಗ್ರೆಸ್ ಭವನದಿಂದ ಪುರಭವನ ಅಂಬೇಡ್ಕರ್ ಪ್ರತಿಮೆಯವರೆಗೆ ಕಾಂಗ್ರೆಸ್ ನಿಂದ ಮೆರವಣಿಗೆ ಹಮ್ಮಿಕೊಂಡಿದ್ದು, ವಿವಿಧ ಧರ್ಮ ಗುರುಗಳೊಂದಿಗೆ ಕಾಂಗ್ರೆಸ್ ಪ್ರಮುಖರು ಭಾಗವಹಿಸಲಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಗೆ ಪ್ರತಿಭಟನಾಕಾರರು ಮತ್ತಿಗೆ ಹಾಕಲಿದ್ದಾರೆ.