ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳ ಆಸ್ತಿ ವಿವರಗಳನ್ನು ಆನ್ ಲೈನ್ ನಲ್ಲಿ ಅಪ್ ಮಾಡಿ ಆ ಮಾಹಿತಿ ಪಡೆಯಲು ಲೋಕಾಯುಕ್ತಕ್ಕೆ ಪೊಲೀಸ್ ವಿಭಾಗಕ್ಕೆ ಲಾಗಿನ್ ನೀಡುವಂತೆ ಕೋರಿ ಲೋಕಾಯುಕ್ತದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಡಿಸೆಂಬರ್ 18ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಎಂ. ಚಂದ್ರಶೇಖರ್ ರೆಡ್ಡಿ ಪತ್ರ ಬರೆದಿದ್ದು, ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಸರ್ಕಾರಿ ನೌಕರರು, ಅಧಿಕಾರಿಗಳು ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದಾಗ ಸಂಬಂಧಿಸಿದ ಇಲಾಖೆಗಳು ಸಕಾಲಕ್ಕೆ ಮಾಹಿತಿ ಒದಗಿಸುವುದಿಲ್ಲ. ಕೆಲವೊಮ್ಮೆ ಸತಾಯಿಸುವದರಿಂದ ತನಿಖೆಗೆ ಅಡಚಣೆಯಾಗುತ್ತಿದೆ. ಇದನ್ನು ತಪ್ಪಿಸಲು ಡಿಜಿಟಲ್ ಸ್ವರೂಪದಲ್ಲಿ ಆಸ್ತಿ ವಿವರ ಸಲ್ಲಿಸುವ ಕ್ರಮ ಕಡ್ಡಾಯಗೊಳಿಸಬೇಕು. ಆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗದಂತೆ ರಕ್ಷಣಾ ಕ್ರಮ ಕೈಗೊಂಡು ಲೋಕಾಯುಕ್ತರ ಜೊತೆ ಹಂಚಿಕೊಳ್ಳಬೇಕೆಂದು ಹೇಳಲಾಗಿದೆ.