ಬೆಂಗಳೂರು: ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪ ದೋಷ ಮತ್ತು ಪ್ರಶ್ನೆಗಳ ಸೃಷ್ಟಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಎಡವಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರ ಬೇಜವಾಬ್ದಾರಿತನದಿಂದ ಅನೇಕ ಪ್ರಶ್ನೆಗಳಿಗೆ ಕೃಪಾಂತಗಳನ್ನು ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಲವು ಪ್ರಶ್ನೋತ್ತರಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲಿಯೂ ಅನಗತ್ಯವಾಗಿ ಸಂಕೀರ್ಣಗೊಳಿಸಲಾಗಿದೆ. ಇದರಿಂದ ಕನ್ನಡ ಅಭ್ಯರ್ಥಿಗಳು ಇಂಗ್ಲಿಷ್ ನಲ್ಲಿಯೂ ಪ್ರಶ್ನೆ ಓದಿಕೊಳ್ಳುವುದು ಅನಿವಾರ್ಯವಾಗಿದ್ದು, ಎರಡು ಬಾರಿ ಪ್ರಶ್ನೆ ಪತ್ರಿಕೆ ಓದುವುದರಿಂದ ಸಮಯ ವ್ಯರ್ಥವಾಗುವ ಜೊತೆಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಿಲ್ಲ.
ಇದರಿಂದಾಗಿ ಅಭ್ಯರ್ಥಿಗಳು ಉತ್ತಮ ಅಂಕ ಗಳಿಸಲು ಸಾಧ್ಯವಾಗದೆ ಅನ್ಯಾಯವಾಗುತ್ತದೆ. ಪದೇಪದೇ ಪ್ರಶ್ನೆ ಪತ್ರಿಕೆಗಳಲ್ಲಿ ತಪ್ಪುಗಳು ಮರುಕಳಿಸುತ್ತಿರುವುದಕ್ಕೆ ಅಭ್ಯರ್ಥಿಗಳು, ಸರ್ಕಾರಕ್ಕೆ, ಜನರಿಗೆ ಏನೆಂದು ಉತ್ತರಿಸಬೇಕೆಂದು ಪರೀಕ್ಷಾ ನಿಯಂತ್ರಕರ ವಿರುದ್ಧ ಕೆಪಿಎಸ್ಸಿ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಶ್ನೆಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೃಪಾಂಕ ನೀಡುವ ಅನಿವಾರ್ಯತೆಗೆ ಕೆಪಿಎಸ್ಸಿ ಸಿಲುಕಿದೆ ಎಂದು ಹೇಳಲಾಗಿದೆ.