ನವದೆಹಲಿ: ಗುಜರಾತ್ ನ ಸೂರತ್ ಸಮೀಪದ ಹಜಿರಾ ಕೈಗಾರಿಕಾ ಪ್ರದೇಶದಲ್ಲಿನ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ(ಎಎಂ/ಎನ್‌ಎಸ್ ಇಂಡಿಯಾ) ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ಅವರು, ಕಲ್ಲಿದ್ದಲಿಗೆ ಬೆಂಕಿ ತಗುಲಿದೆ. ನಂತರ ಸ್ಥಾವರದ ಒಂದು ವಿಭಾಗದಲ್ಲಿ ಬೆಂಕಿ ಹೊತ್ತಿಕೊಂಡಿತು. ಆ ಸಮಯದಲ್ಲಿ ಲಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರನ್ನು ಬೆಂಕಿ ಆವರಿಸಿತು, ಇದು ಅವರ ಸಾವಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ಹಜಿರಾ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ,. ಮೃತರ ಪೈಕಿ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಾಲ್ಕನೆಯದು ಇನ್ನೂ ದೃಢಪಟ್ಟಿಲ್ಲ. ಇದು ಸ್ಥಾವರದ ಕೋರೆಕ್ಸ್ ಘಟಕದಲ್ಲಿನ ಉಪಕರಣಗಳ ವೈಫಲ್ಯದಿಂದ ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ಥಗಿತಗೊಂಡಿದ್ದ ಘಟಕವನ್ನು ಪುನರಾರಂಭಿಸುವಾಗ ಈ ಘಟನೆ ಸಂಭವಿಸಿದೆ. ಲಿಫ್ಟ್ ನಲ್ಲಿ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಕಂಪನಿಯ ನಾಲ್ವರು ಗುತ್ತಿಗೆ ಕಾರ್ಮಿಕರು ಬೆಂಕಿಯಿಂದ ಮೃತಪಟ್ಟಿದ್ದಾರೆ. ಒಬ್ಬ ಹೆಚ್ಚುವರಿ ಕೆಲಸಗಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಪ್ಲಾಂಟ್‌ನ ಆನ್-ಸೈಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಕಂಪನಿಯು ಅಪಘಾತದ ಮೂಲ ಕಾರಣವನ್ನು ನಿರ್ಧರಿಸಲು ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ. ಪೊಲೀಸರೂ ತನಿಖೆ ಕೈಗೊಂಡಿದ್ದಾರೆ. ಮೃತರು ಮತ್ತು ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ನಾವು ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.