ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆಗಳು ಜೋರಾಗಿವೆ. ಈ ನಡುವೆ ಬಹಳ ಎಚ್ಚರಿಕೆಯಿಂದ ಹೊಸ ವರ್ಷ ಆಚರಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಬಹಳ ಎಚ್ಚರಿಕೆಯಿಂದ ಹೊಸ ವರ್ಷ ಆಚರಣೆ ಮಾಡಬೇಕು. ಬೆಂಗಳೂರಷ್ಟೇ ಅಲ್ಲ ಹೊರ ಜಿಲ್ಲೆಗಳಲ್ಲಿಯೂ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಹೊಸ ವರ್ಷಾಚರಣೆ ಮಾಡಬೇಕು. ಹೋಟೆಲ್, ರೆಸ್ಟೋರೆಂಟ್, ಪಬ್, ಬಾರ್ ಗಳು ಎಂದಿನಂತೆ ರಾತ್ರಿ 1 ಗಂಟೆಯವರೆಗೆ ತೆರೆದಿರುತ್ತದೆ. ನಗರದೆಲ್ಲೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.