ಚಂಡೀಗಢ: ಕಿಸಾನ್ ಮಜ್ದೂರ್ ಮೋರ್ಚಾ(ಕೆಎಂಎಂ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಕರೆ ನೀಡಿರುವ ಪಂಜಾಬ್ ಬಂದ್‌ನಿಂದಾಗಿ ರೈಲ್ವೆ ಸೋಮವಾರ 150 ರೈಲುಗಳನ್ನು ರದ್ದುಗೊಳಿಸಿದೆ.
ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಎರಡೂ ಗುಂಪುಗಳಿಂದ ಕಳೆದ ವಾರ ಬಂದ್ ಘೋಷಿಸಲಾಯಿತು.
ಪ್ರತಿಭಟನಾ ನಿರತ ರೈತರು ಬೆಳಿಗ್ಗೆ 7 ರಿಂದ ಸಂಜೆ 4 ರವರೆಗೆ ಹಲವಾರು ಸ್ಥಳಗಳಲ್ಲಿ ರೈಲು ಹಳಿಗಳನ್ನು ತಡೆದು ಪ್ರಯಾಣಿಕರು ಮತ್ತು ಸರಕು ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಲಿದ್ದಾರೆ. ಇದರಿಂದಾಗಿ ಉತ್ತರ ರೈಲ್ವೇ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ಸೇರಿದಂತೆ 150 ರೈಲುಗಳನ್ನು ರದ್ದುಗೊಳಿಸಿದೆ. ಎರಡು ಹೊಸ ದೆಹಲಿ – ವೈಷ್ಣೋ ದೇವಿ, ಮತ್ತು ಇನ್ನೊಂದು ಹೊಸ ದೆಹಲಿ – ಅಂಬ್ ಅಂಡೌರಾ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರ ರದ್ದು ಮಾಡಲಾಗಿದೆ.
ರದ್ದಾದ ಇತರ ರೈಲುಗಳಲ್ಲಿ ನವದೆಹಲಿಯಿಂದ ಕಲ್ಕಾ, ಅಮೃತಸರ, ಚಂಡೀಗಢಕ್ಕೆ ಹೋಗುವ ಮೂರು ಶತಾಬ್ದಿ ಎಕ್ಸ್ ಪ್ರೆಸ್ ಮತ್ತು ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುವ ಹಲವಾರು ಉನ್ನತ-ಮಟ್ಟದ ರೈಲುಗಳ ಸಂಚಾರ ನಿಲ್ಲಿಸಲಾಗಿದೆ.
ದೆಹಲಿ ಮತ್ತು ಚಂಡೀಗಢದ ನಡುವೆ ಪ್ರಯಾಣಿಸುವ ಪ್ರಯಾಣಿಕರು ಪಂಚಕುಲ, ಬರ್ವಾಲಾ, ಮುಲ್ಲಾನಾ, ಯಮುನಾನಗರ, ರಾಡೌರ್, ಲಾಡ್ವಾ ಮತ್ತು ಪಿಪ್ಲಿಯಲ್ಲಿ NH-44 ಮೂಲಕ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಅಂಬಾಲಾ ಪೊಲೀಸರು ಸಲಹೆ ನೀಡಿದ್ದಾರೆ.