ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದರೂ ಬೆಂಗಳೂರು ಉತ್ತರ ವಿವಿ ಪರೀಕ್ಷೆ ನಡೆಸಿದೆ.
ಶಾಲಾ, ಕಾಲೇಜು, ಕಚೇರಿಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದ್ದರೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯ ಬೆಂಗಳೂರಿನ ಕೆಆರ್ ಪುರ ಬಳಿಯ 2 ಕಾಲೇಜುಗಳಲ್ಲಿ ಸ್ನಾತಕ ಪದವಿ ಬಿಬಿಎ ಕೋರ್ಸ್ ಪ್ರವಾಸೋದ್ಯಮ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ಗೆ ಸಂಬಂಧಿತ ವಿಷಯಗಳ ಪರೀಕ್ಷೆ ನಡೆಸಲಾಗಿದೆ.
ಪ್ರಶ್ನೆ ಪತ್ರಿಕೆಯನ್ನು ಗುರುವಾರವೇ ಯುಯುಸಿಎಂಎಸ್ ಆನ್ಲೈನ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಅದು ತಲುಪಿತ್ತು. ಹೀಗಾಗಿ ಶುಕ್ರವಾರ ಪರೀಕ್ಷೆ ನಡೆಸಲೇಬೇಕಾದ ಅನಿವಾರ್ಯತೆ ಇದ್ದ ಕಾರಣ ಪರೀಕ್ಷೆ ನಡೆಸಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಕೆ. ತಿಪ್ಪೇಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಸರ್ಕಾರಿ ರಜೆ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ ಎಂಬಿಎ ದ್ವಿತೀಯ ಸೆಮಿಸ್ಟರ್ ಪರೀಕ್ಷೆ, ಮೈಸೂರು ವಿವಿಯ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಗಳು, ಕುವೆಂಪು ವಿವಿ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.