ಬೆಂಗಳೂರು: ಅಡಿಕೆ ಬೆಳೆ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.
ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಯೋಚಿಸಿದ್ದ ಮೂರು ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಹವ್ಯಕ ಸಮಾಜದವರ ಮೂಲ ಕೃಷಿಯಾದ ಅಡಿಕೆ ಉತ್ಪನ್ನದ ಕುರಿತು ಯಾವುದೇ ರೀತಿಯ ವಿರೋಧ ಅಭಿಪ್ರಾಯಗಳು ವ್ಯಕ್ತವಾದರೂ ಕೇಂದ್ರ ಸರ್ಕಾರ ಅದರ ಬಗ್ಗೆ ಚಿಂತಿಸದೆ ಅಡಿಕೆ ಬೆಳೆ ಪರವಾಗಿರುತ್ತದೆ ಎಂದು ಹೇಳಿದ್ದಾರೆ.
ಅಡಿಕೆ ಹವ್ಯಕ ಸಮುದಾಯದ ಮೂಲ ಕೃಷಿಯಾಗಿದೆ. ಮದುವೆಯಿಂದ ಶ್ರಾದ್ಧದವರೆಗೆ ಅಡಿಕೆ ಅತ್ಯಗತ್ಯವಾಗಿದೆ. ಆದರೆ, ಅಡಿಕೆಯ ಕುರಿತು ಅನೇಕ ರೀತಿಯ ವರದಿಗಳು ಬಂದಿದ್ದು, ಎಷ್ಟೇ ವರದಿಗಳು ಬಂದರೂ ಅದಕ್ಕೆ ಬೆಳೆಗಾರರು ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆ ಇಲ್ಲ. ಯಾವುದೇ ಸಮಸ್ಯೆಗಳು ಎದುರಾದರೂ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಪರವಾಗಿರುತ್ತದೆ ಎಂದು ತಿಳಿಸಿದ್ದಾರೆ.