ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
53 ವರ್ಷದ ಸಿವಿಲ್ ಗುತ್ತಿಗೆದಾರ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್ ಮತ್ತು ಜಯರಾಜ್ ಎಂಬುವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ದೂರುದಾರ ಗುತ್ತಿಗೆದಾರನಿಗೆ ಇತ್ತೀಚೆಗೆ ಪರಿಚಯವಾಗಿದ್ದ ಮಹಿಳೆ ತನ್ನ ಮಗುವಿಗೆ ಆರೋಗ್ಯ ಸರಿ ಇಲ್ಲವೆಂದು ಹಣ ಪಡೆದುಕೊಳ್ಳುತ್ತಿದ್ದಳು. ಮನೆಗೆ ಬನ್ನಿ ಎಂದು ಕರೆಯುತ್ತಿದ್ದಳು. ಡಿಸೆಂಬರ್ 9ರಂದು ರಸ್ತೆಯಲ್ಲಿ ಸಿಕ್ಕ ಮಹಿಳೆ ಸಮೀಪದಲ್ಲಿಯೇ ಮನೆ ಇದೆ ಬನ್ನಿ ಎಂದು ಆಹ್ವಾನಿಸಿದ್ದಾಳೆ. ದೂರುದಾರ ಆಕೆಯ ಮನೆಗೆ ಹೋದಾಗ ಮೂವರು ಆರೋಪಿಗಳು ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಅಕ್ರಮ ಸಂಬಂಧದ ಕುರಿತು ನಿನ್ನ ಪತ್ನಿಗೆ ಹೇಳುತ್ತೇವೆ ಎಂದು ಬೆದರಿಸಿ 55 ಸಾವಿರ ರೂ. ಹಣ, ಚಿನ್ನದ ಸರ, ಉಂಗುರ ಪಡೆದು ಪರಾರಿಯಾಗಿದ್ದಾರೆ. ಮಹಿಳೆ ಕೂಡ ಅವರೊಂದಿಗೆ ಹೋಗಿದ್ದು, ಈ ಬಗ್ಗೆ ಅನುಮಾನಗೊಂಡ ಗುತ್ತಿಗೆದಾರ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.