ಚಿಕ್ಕಬಳ್ಳಾಪುರ: ಸಹೋದರಿಯರ ಗ್ಯಾಂಗ್ ವೊಂದು ಬುರ್ಖಾ ಧರಿಸಿ ಬಸ್ ಗಳಲ್ಲಿ ಮಹಿಳೆಯರ ಚಿನ್ನದ ಸರ, ಬ್ಯಾಗ್ ನಲ್ಲಿದ್ದ ಪರ್ಸ್, ಹಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಗ್ಯಾಂಗ್ ನ್ನು ಗೌರಿಬಿದನೂರು ಪೊಲಿಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ರೇಖಾ ಬಾಯಿ, ಕರೀನಾ, ರೋಜಾ ಬಂಧಿತ ಆರೋಪಿಗಳು, ಬಂಧನದ ವೇಳೆ ಪುಷ್ಪಾ ಎಂಬ ಮಹಿಳೆ ಎಸ್ಕೇಪ್ ಆಗಿದ್ದಾಳೆ. ತಪ್ಪಿಸಿಕೊಂಡಿರುವ ಪುಷ್ಪಾ ಹಾಗೂ ಬಂಧಿತ ರೇಖಾ ಬಾಯಿ ಅಕ್ಕತಂಗಿ. ಹಾಗೇ ಕರೀನಾ ಹಾಗೂ ರೋಜಾ ಕೂಡ ಸಹೋದರಿಯರು ಎಂದು ತಿಳಿದುಬಂದಿದೆ.
ನಾಲ್ವರು ಒಂದೇ ಕುಟುಂಬದವರಾಗಿದ್ದು, ಬಸ್ ನಿಲ್ದಾಣಗಳಲ್ಲಿ, ಜನಸಂದಣಿ ಇರುವ ಸ್ಥಳಗಳಲ್ಲಿ, ಬಸ್ ಗಳಲ್ಲಿ ಬುರ್ಖಾ ಧರಿಸಿ ಕಳ್ಳತನ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದರು.
ಕಳೆದ ನ.16ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಬಸ್ ನಿಲ್ದಾಣದಲ್ಲಿ ಶಾಂತಕುಮಾರಿ ಎಂಬ ಮಹಿಲೆ ಬಸ್ ಹತ್ತುವಾಗ ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ತೂಕದ 2 ಎಳೆ ಚಿನ್ನದ ಸರ ಕದ್ದು ಪರಾರಿಯಾಗಿದ್ದರು. ಅದೇ ದಿನ ರತ್ನಮ್ಮ ಎಂಬ ಮಹಿಲೆ ಬ್ಯಾಗ್ ನಲ್ಲಿದ್ದ 1 ಲಕ್ಷ ರೂಪಾಯಿ ಎಗರಿಸಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಪರಿಶೀಲನೆ ವೇಳೆ ನಾಲ್ವರು ಬುರ್ಖಾಧಾರಿ ಮಹಿಳೆಯರ ಮೇಲೆ ಅನುಮಾನ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ಗೌರಿ ಬಿದನೂರು ಬಸ್ ನಿಲ್ದಾಣದಲ್ಲಿ ನಾಲ್ವರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಈ ವೇಳೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆದರೆ ಓರ್ವ ಕಳ್ಳಿ ಎಸ್ಕೇಪ್ ಆಗಿದ್ದು, ಆಕೆಗಾಗಿ ಶೋಧ ನಡೆಸಲಾಗಿದೆ.