ಶನಿವಾರ ಬೆಳಗ್ಗೆ ದೆಹಲಿಯಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ವಿಲಕ್ಷಣ ಘಟನೆಯೊಂದು ಸಂಭವಿಸಿದೆ. ಬೆಳಗ್ಗೆ 7:20 ಕ್ಕೆ ಹೊರಡಬೇಕಿದ್ದ ರೈಲು ಅನಿರೀಕ್ಷಿತ ವಿಳಂಬವನ್ನು ಎದುರಿಸಬೇಕಾಯಿತು.
ಸಮಯ ಕಳೆದರೂ ರೈಲು ಇನ್ನೂ ಹೊರಡದ ಕಾರಣ ಪ್ರಯಾಣಿಕರು ಪರದಾಡಲಾರಂಭಿಸಿದ್ದರು. ವಿಳಂಬದ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಕೇಳಿದಾಗ ಅವರು ನೀಡಿದ ಕಾರಣ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.
ಸಂಪೂರ್ಣ ಎಕ್ಸಿಕ್ಯೂಟಿವ್ ಕೋಚ್ ಅನ್ನು ಮರೆತು ರೈಲಿಗೆ ಜೋಡಿಸಲಾಗಿರಲಿಲ್ಲ ಎಂದು ತಿಳಿದುಬಂದಿದೆ. ಪರಿಣಾಮವಾಗಿ ರೈಲು ಸುಮಾರು ಎರಡು ಗಂಟೆ ತಡವಾಗಿ ಹೊರಟಿತು. ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಎಕ್ಸಿಕ್ಯೂಟಿವ್ ಕೋಚ್ ಅನ್ನು ಜೋಡಿಸಲು ರೈಲ್ವೆ ಸಿಬ್ಬಂದಿ ವಿಫಲವಾದ ಕಾರಣ ಈ ಘಟನೆ ಸಂಭವಿಸಿದೆ.
ಘಟನೆಯ ಬಗ್ಗೆ ತಿಳಿದ ನಂತರ, ಪ್ರಯಾಣಿಕರು ತಮ್ಮ ಕೋಪವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. ಕೆಲವರು ನವದೆಹಲಿ ನಿಲ್ದಾಣದಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಬಳಿ ಪ್ರತಿಭಟನೆ ನಡೆಸಿದರು.
ಹಲವಾರು ಪ್ರಯಾಣಿಕರು ಕಚೇರಿ ಕೆಲಸ, ಕಾಲೇಜು, ಕಾರ್ಯಕ್ರಮಕ್ಕೆ ಹಾಜರಾಗುವುದು ಅಥವಾ ಪ್ರಯಾಣದ ಯೋಜನೆಗಳಂತಹ ತುರ್ತು ಕಾರ್ಯಗಳನ್ನು ಹೊಂದಿದ್ದರು ಮತ್ತು ಈ ವಿಳಂಬವು ಅವರಿಗೆ ತೀವ್ರ ತೊಂದರೆಯನ್ನು ತಂದೊಡ್ಡಿತ್ತು.
ರೈಲ್ವೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲವಾದರೂ, ರೈಲ್ವೆ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.