ಹಿಂದೆಲ್ಲಾ ಪ್ರವಾಸಕ್ಕೆ ಹೋಗುವುದೆಂದರೆ ಪುಣ್ಯಕ್ಷೇತ್ರಗಳಿಗೆ ಮಾತ್ರ ಎನ್ನುವಂತಿತ್ತು. ಆಧುನಿಕತೆ ಬೆಳೆದಂತೆಲ್ಲಾ ಐತಿಹಾಸಿಕ, ಪೌರಾಣಿಕ, ಆಧುನಿಕ, ನಿಸರ್ಗ ರಮಣೀಯ ಸ್ಥಳಗಳಿಗೂ ಪ್ರವಾಸೋದ್ಯಮದಲ್ಲಿ ಆದ್ಯತೆ ಸಿಕ್ಕಿದೆ. ಪ್ರವಾಸಿ ಸ್ಥಳಗಳಿಗೆ ವಿವಿಧೆಡೆಯಿಂದ ಜನ ಬರುತ್ತಾರೆ.
ಕೆಲವರು ವರ್ಷದಲ್ಲಿ ಎರಡು, ಮೂರು ಬಾರಿ ಇಲ್ಲವೇ, ವರ್ಷಕ್ಕೊಮ್ಮೆಯಾದರೂ ಪ್ರವಾಸಕ್ಕೆ ಹೋಗುತ್ತಾರೆ. ಈಗಂತೂ ಟ್ರಾವೆಲ್ಸ್ ಗಳು, ಪ್ರವಾಸಕ್ಕೆ ಕರೆದುಕೊಂಡು ಹೋಗಲೆಂದೇ ಪ್ರತ್ಯೇಕ ವ್ಯವಸ್ಥೆಗಳು ಕೂಡ ಇವೆ. ಯಾವುದೇ ರೀತಿಯ ಪ್ರವಾಸಕ್ಕೆ ತೆರಳುವ ಮೊದಲು ನಿಮಗೆ ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಬಟ್ಟೆ ಮೊದಲಾದ ಅಗತ್ಯ ಇರುವಷ್ಟು ಮಾತ್ರ ವಸ್ತುಗಳನ್ನು ಜೋಡಿಸಿಕೊಳ್ಳಿರಿ. ಸುರಕ್ಷತೆಯ ದೃಷ್ಠಿಯಿಂದ ಗುಂಪಾಗಿ ಹೋಗುವುದು ಒಳ್ಳೆಯದು.
ಹತ್ತಿರದ ಸ್ಥಳಗಳಾದರೆ, ಕುಟುಂಬದವರೊಡನೆ ಹೋದರೆ ಅನುಕೂಲವಾದೀತು. ಅಲ್ಲದೇ, ಪ್ರವಾಸದ ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡಿ. ಅಪರಿಚಿತರೊಂದಿಗೆ ಬೆರೆಯಬೇಡಿ. ಬೆಲೆಬಾಳುವ ವಸ್ತು, ಒಡವೆ ತೆಗೆದುಕೊಂಡು ಹೋಗಬೇಡಿ. ನೀವು ಹೋಗಲಿರುವ ಸ್ಥಳದಲ್ಲಿ ಉಳಿಯುವ ಅನಿವಾರ್ಯತೆ ಇದ್ದರೆ, ಮೊದಲೇ ರೂಂ ಕಾಯ್ದಿರಿಸಿದರೆ ಒಳ್ಳೆಯದು.