ರತನ್ ನೇವಲ್ ಟಾಟಾ, ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದು, ಅಕ್ಟೋಬರ್ 9 ರಂದು ವಿಧಿವಶರಾಗಿದ್ದಾರೆ. ಅವರ ಮಾನವೀಯ ಕಾರ್ಯಗಳ ಕುರಿತ ಸಂಗತಿಗಳು ಈಗ ಬಹಿರಂಗವಾಗುತ್ತಿದ್ದು, ಅಪರೂಪದ ವ್ಯಕ್ತಿತ್ವದ ರತನ್ ಟಾಟಾ ಭಾರತೀಯರ ಪಾಲಿನ ಹೆಮ್ಮೆ ಎಂದರೆ ತಪ್ಪಾಗಲಾರದು. ಅವರ ಮಾನವೀಯ ಕಾರ್ಯದ ಮತ್ತೊಂದು ಘಟನೆಯ ವರದಿ ಇಲ್ಲಿದೆ.
COVID ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ಸಾವಿರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಈ ಸಮಯದಲ್ಲಿ ಹಲವಾರು ಕಂಪನಿಗಳು ಪಿಂಕ್ ಸ್ಲಿಪ್‌ಗಳನ್ನು ನೀಡಿವೆ. ಅವರಲ್ಲಿ ವಿಕಾಸ್ ತ್ಯಾಗಿ ಕೂಡಾ ಒಬ್ಬರಾಗಿದ್ದು, ಅವರು ಕಳೆದ 20 ವರ್ಷಗಳಿಂದ ಟಾಟಾ ಗ್ರೂಪ್‌ನಲ್ಲಿ ಉದ್ಯೋಗಿಯಾಗಿದ್ದರು.ತಮ್ಮ ತಂದೆ ಕೆಲಸ ಕಳೆದುಕೊಂಡ ಕಾರಣ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ವಿಕಾಸ್ ತ್ಯಾಗಿಯವರ ಮಗಳು ನೇರವಾಗಿ ರತನ್ ಟಾಟಾ ಅವರಿಗೇ ಕರೆ ಮಾಡಲು ಮುಂದಾಗಿದ್ದಾರೆ.
ರತನ್ ಟಾಟಾ ತಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಾರೆಂಬ ವಿಶ್ವಾಸ ಹೊಂದಿದ್ದ ತ್ಯಾಗಿಯವರ ಕಿರಿಯ ಮಗಳು, ರತನ್ ಟಾಟಾ ಅವರ ದೂರವಾಣಿ ಸಂಖ್ಯೆಯನ್ನು ಗೂಗಲ್ ಮೂಲಕ ಹುಡುಕಿ ಕರೆ ಮಾಡಿದ್ದಾರೆ. ಆದರೆ ಎರಡು ಬಾರಿ ಪ್ರಯತ್ನಿಸಿದರೂ ರತನ್ ಟಾಟಾ ಅವರ ಸಹಾಯಕರು ಕರೆ ಸ್ವೀಕರಿಸಿದ್ದರು. ಆದರೆ ರತನ್ ಟಾಟಾ ನಿಮಗೆ ವಾಪಾಸ್ ಕರೆ ಮಾಡುತ್ತಾರೆಂಬ ಮಾಹಿತಿಯನ್ನು ಅವರಿಗೆ ನೀಡಲಾಗಿತ್ತು.
ಕೆಲ ದಿನಗಳಲ್ಲಿಯೇ ನಿರೀಕ್ಷಿಸಿದಂತೆ ರತನ್ ಟಾಟಾ ಅವರಿಂದ ಕರೆ ಬಂದಿದ್ದು, ಇವರುಗಳ ಸಮಸ್ಯೆಯನ್ನು ಆಲಿಸಿದ ಅವರು ವಿಕಾಸ್ ತ್ಯಾಗಿಯವರಿಗೆ ಅದೇ ಉದ್ಯೋಗದಲ್ಲಿ ಮರು ನೇಮಕವಾಗುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ತ್ಯಾಗಿಯವರ ಕುಟುಂಬ ಅಂದು ರತನ್ ಟಾಟಾ ಮಾಡಿದ ಸಹಾಯವನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದು, ಅಗಲಿದ ಮಹಾಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.