ಬಿಹಾರದ ಬೇಗುಸರಾಯ್‌ನಲ್ಲಿ ಮೊಹಮ್ಮದ್ ಜಿಯಾವುದ್ದೀನ್ ಎಂಬ ಶಿಕ್ಷಕ, ಭಗವಾನ್ ರಾಮ ಮತ್ತು ಹನುಮಾನ್ ಮೂಲತಃ ಮುಸ್ಲಿಮರಾಗಿದ್ದು, ನಮಾಜ್ ಮಾಡುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಹೇಳಿಕೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಶಿಕ್ಷಕರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಶಾಲೆಗೆ ಮುತ್ತಿಗೆ ಹಾಕಿದ್ದರು.
ಬಿಹಾರದ ಬೇಗುಸರಾಯ್‌ನ ಬಚ್ವಾರಾ ಬ್ಲಾಕ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ಶಿಕ್ಷಕ ಮೊಹಮ್ಮದ್ ಜಿಯಾವುದ್ದೀನ್ “ಭಗವಾನ್ ರಾಮ ಮತ್ತು ಅವನ ಭಕ್ತ ಹನುಮಂತ ಮುಸ್ಲಿಮರು. ಅವರು ನಮಾಜ್ ಮಾಡುತ್ತಿದ್ದರು” ಎಂದು ಹೇಳಿದ್ದರು. ಶಾಲೆ ಮುಗಿದ ನಂತರ ಮಕ್ಕಳು ಪೋಷಕರಿಗೆ ಈ ವಿಷಯ ತಿಳಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಗ್ರಾಮಸ್ಥರು ಮಂಗಳವಾರ ಶಿಕ್ಷಕರ ಮನೆಗೆ ತೆರಳಿ ಪ್ರತಿಭಟನೆ ನಡೆಸಿದರು.
ಬುಧವಾರ ಶಾಲೆ ತೆರೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಾಲೆಗೆ ಆಗಮಿಸಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅದರ ಬಗ್ಗೆ ತರಗತಿಯ ವಿದ್ಯಾರ್ಥಿಗಳನ್ನು ಕೇಳಿದಾಗ, ‘ಜಿಯಾವುದ್ದೀನ್ ಸರ್ ನಮಗೆ ನಮಾಜ್ ಓದಿದ ಮೊದಲ ಹಿಂದೂ ವ್ಯಕ್ತಿ ಹನುಮಂತ ಎಂದು ಹೇಳಿದರು, ಭಗವಾನ್ ರಾಮನು ನಮಾಜ್ ಓದಲು ಹೇಳಿದ್ದಾನೆ ಮತ್ತು ಹನುಮಾನ್ ಮುಸ್ಲಿಂ ಎಂದು ಹೇಳಿದರುʼ ಎಂಬ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸ್ಪಷ್ಟನೆ ನಂತರ ಪ್ರತಿಭಟನೆ ತೀವ್ರಗೊಂಡಿತು.
ಶಾಲೆಯ ಇತರೆ ಹಲವಾರು ಶಿಕ್ಷಕರು ಸಹ ಆಕ್ರೋಶಗೊಂಡಿದ್ದು, ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿದ ನಂತರ ಸಂಬಂಧಪಟ್ಟ ಶಿಕ್ಷಕನಿಗೆ ಕ್ಷಮೆಯಾಚಿಸಲು ಒತ್ತಾಯಿಸಲಾಯಿತು. ಆಗ ‘ನಾನು ಈ ವಿಷಯಗಳನ್ನು ತಪ್ಪಾಗಿ ಕಲಿಸಿದೆ. ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಭವಿಷ್ಯದಲ್ಲಿ ಇದು ಸಂಭವಿಸುವುದಿಲ್ಲʼ ಎಂದು ಶಿಕ್ಷಕ ಮೊಹಮ್ಮದ್ ಜಿಯಾವುದ್ದೀನ್ ಹೇಳಿದ್ದಾರೆ.