ಸಿಎಂ ಸಿದ್ದರಾಮಯ್ಯ ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಶಾಸಕ ಜನಾರ್ಧನರೆಡ್ಡಿಗೆ ಕೊಪ್ಪಳ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಏನಿದು ಘಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವ ವೇಳೆ ನಿರ್ಬಂಧವಿದ್ದರೂ ಸಹ ನಿಯಮ ಉಲ್ಲಂಘಿಸಿ ಶಾಸಕ ಜನಾರ್ದನ ರೆಡ್ಡಿಯವರಿಗೆ ಸೇರಿದ ಕಾರು ಸಿಎಂ ಬೆಂಗಾವಲು ವಾಹನಗಳ ಎದುರುಗಡೆಯಿಂದ ಚಲಾಯಿಸಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾಸಕ ಜನಾರ್ದನ ರೆಡ್ಡಿಯವರೇ ಖುದ್ದು ಸಿಎಂ ಬೆಂಗಾವಲು ವಾಹನಗಳ ಎದುರುಗಡೆಯಿಂದ ತಮ್ಮ ಕಾರು ಚಲಾಯಿಸಿರುವುದು ಸೆರೆಯಾಗಿತ್ತು.
ಜನಾರ್ದನ ರೆಡ್ಡಿ ಅವರಿದ್ದ ಕಾರು ಸೇರಿದಂತೆ ಒಟ್ಟು ಮೂರು ಕಾರುಗಳು ಸಿಎಂ ಬೆಂಗಾವಲು ವಾಹನಗಳ ಎದುರೇ ರಸ್ತೆ ವಿಭಜಕ ನುಗ್ಗಿಕೊಂಡು ಹೋಗಿದ್ದು, ಸಿಎಂ ಅವರ ವಾಹನ ಬರುತ್ತಿದ್ದ ಕಾರಣ ಇತರೆ ವಾಹನಗಳಿಗೆ ತಡೆ ನೀಡಲಾಗಿತ್ತು. ಆದರೆ ಎಷ್ಟು ಹೊತ್ತು ಕಾದರೂ ತಮಗೆ ಸಾಗಲು ಸಿಗ್ನಲ್ ಸಿಗದ ಕಾರಣ ಬೇಸತ್ತು ಜನಾರ್ದನ ರೆಡ್ಡಿ ಮತ್ತು ಅವರ ಬೆಂಬಲಗರಿದ್ದ ಕಾರುಗಳು ನಿಯಮ ಉಲ್ಲಂಘಿಸಿ ಹೋಗಿವೆ ಎಂದು ಹೇಳಲಾಗುತ್ತಿದೆ. ಜನಾರ್ದನ ರೆಡ್ಡಿಯವರು ಈ ಸಂದರ್ಭದಲ್ಲಿ ಸ್ವತಃ ಕಾರು ಚಲಾಯಿಸುತ್ತಿದ್ದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.