ಹೃದಯ ಸಂಬಂಧಿತ ಯಾವುದೇ ಖಾಯಿಲೆಗಳಿಗೆ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ಸಹಯೋಗದಲ್ಲಿ ಕೌಲ್ಬಜಾರ್ನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಹೃದಯ ದಿನ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಜಾಗೃತಿ ಹಾಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೃದಯಾಘಾತವಾಗುವುದು ಒಂದು ಭಯಾನಕ ಅನುಭವ. ಜೀವಕ್ಕೆ ಅಪಾಯಕಾರಿಯೂ ಹೌದು, ದೈನಂದಿನ ಒತ್ತಡದ ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ ಮಾನಸಿಕ ಒತ್ತಡವನ್ನು ಸೂಕ್ತವಾಗಿ ನಿಭಾಯಿಸುವ ಜೊತೆಗೆ ನಿಯಮಿತ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕುಟುಂಬದ ಸದಸ್ಯರಲ್ಲಿ ಹೃದಯ ಸಂಬಂಧಿತ ಖಾಯಿಲೆಗಳಿದ್ದರೆ ಅಥವಾ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿರಂತರ ಧೂಮಪಾನ, ಅಧಿಕ ಬೊಜ್ಜು, ಮಧ್ಯಸೇವನೆ, ಹೈ ಕೊಲೆಸ್ಟಾçಲ್ ಇದ್ದಲ್ಲಿ ಹೃದಯ ಸಂಬಂಧಿತ ಕಾಯಿಲೆಗೆ ಬೇಗನೆ ತುತ್ತಾಗಬಹುದು. ಹಾಗಾಗಿ ಕನಿಷ್ಟ 30 ನಿಮಿಷಗಳ ಸರಳ ವ್ಯಾಯಾಮ, ಆಹಾರದಲ್ಲಿ ಕಡಿಮೆ ಕೊಬ್ಬಿನಾಂಶ ಬಳಸಬೇಕು. ಧ್ಯಾನ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಳ್ಳೆಯದು ಎಂದು ಅವರು ತಿಳಿಸಿದರು.ಒಂದು ವೇಳೆ ವೈದ್ಯರು ಸೂಚಿಸಿದಲ್ಲಿ ನಿಯಮಿತ ಔಷಧಿ ಸೇವನೆಯೊಂದಿಗೆ ಸದಾ ಲವಲವಿಕೆಯಿಂದ ಇರುವ ಮೂಲಕ ಕಾಯಿಲೆ ದೂರಗೊಳಿಸಬಹುದಾಗಿದೆ ಎಂದರು.
.