ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯವರು ಕೆಪಿಸಿಸಿ ಕಛೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ “ಗಾಂಧಿ ಭಾರತ” ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಬಾಪುವಿಗೆ ಸಿಎಂ ಸಿದ್ದರಾಮಯ್ಯ ನಮಿಸಿದರು.
ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಕಾಂಗ್ರೆಸ್ ಪಕ್ಷದ ಇತಿಹಾಸ, ಕಾಂಗ್ರೆಸಿಗರ ತ್ಯಾಗ – ಬಲಿದಾನವನ್ನು ಪಕ್ಷದ ಹೆಮ್ಮೆಯ ಸದಸ್ಯನಾಗಿ ಈ ದಿನ ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ ಎಂದರು.
ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ವಿರುದ್ಧ ಸಿಡಿದೆದ್ದ ಕೋಟ್ಯಂತರ ಭಾರತೀಯರ ಆಕ್ರೋಶವನ್ನು ಅಹಿಂಸಾ ಮಾರ್ಗದಲ್ಲಿ ಮುನ್ನಡೆಸಿ, ಅವರ ಸ್ವಾತಂತ್ರ್ಯದ ಕನಸುಗಳನ್ನು ನನಸು ಮಾಡಲು ಗಾಂಧೀಜಿಯವರು ಆಯ್ದುಕೊಂಡ ಸತ್ಯಾಗ್ರಹ ಮತ್ತು ಪಾದಯಾತ್ರೆಯ ಚಳವಳಿಗಳು ಜಗತ್ತಿನ ಅಹಿಂಸಾತ್ಮಕ ಹೋರಾಟಗಾರರೆಲ್ಲರಿಗೂ ಇಂದಿಗೂ ಪ್ರಬಲ ಅಸ್ತ್ರಗಳಾಗಿವೆ. ಮಹಾತ್ಮ ಗಾಂಧಿಯವರ ಜಯಂತಿಯ ಅಂಗವಾಗಿ ಇಂದು ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದ ವರೆಗಿನ “ಗಾಂಧಿ ನಡಿಗೆ” ಪಾದಯಾತ್ರೆಯಲ್ಲಿ ಪಾಲ್ಗೊಂಡು, ಗಾಂಧಿ ಅನುಯಾಯಿಗಳ ಜೊತೆ ಹೆಜ್ಜೆ ಹಾಕಿದೆ. ಸತ್ಯ, ಶಾಂತಿ, ಅಹಿಂಸೆಗಳು ಮನುಕುಲದ ಹಾದಿಗೆ ಬೆಳಕಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.