alex Certify ಶಿವಮೊಗ್ಗದಲ್ಲಿ ರೈಲ್ವೇ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಚಿವ ವಿ.ಸೋಮಣ್ಣ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿ ರೈಲ್ವೇ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಚಿವ ವಿ.ಸೋಮಣ್ಣ ಸೂಚನೆ

ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಒಂದು ದಶಕದ ಅವಧಿಯಲ್ಲಿ ರಾಜ್ಯ ರೈಲ್ವೇ ಕ್ಷೇತ್ರದಲ್ಲಿ ಅನೇಕ ಮಹತ್ವ ನಿರ್ಣಯಗಳನ್ನು ಕೈಗೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ ಎಂದು ರೈಲ್ವೇ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಅವರು ಇಂದು ಶಿಕಾರಿಪುರದಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ರೈಲ್ವೇ ಅಭಿವೃದ್ಧಿ ಕಾಮಗಾರಿಗಳು, ಶಿವಮೊಗ್ಗ ಸಮೀಪದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಾನಗರಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಸೈನಿಕರಂತೆ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಹ ನುಡಿದಂತೆ ಮುನ್ನಡೆಯುತ್ತಿದೆ ಎಂದ ಅವರು, ರೈಲ್ವೇ ಕ್ಷೇತ್ರ ಅಸಾಧಾರಣ ಪ್ರಗತಿ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಹೊಸಭಾಷ್ಯ ಬರೆದಿದೆ ಎಂದರು.

ರೈಲ್ವೇ ಕ್ಷೇತ್ರದ ಪ್ರಗತಿ ಜನಸಾಮಾನ್ಯರ ಬೇಡಿಕೆ ಎಂದು ಪರಿಗಣಿಸದೇ ಅವಶ್ಯಕತೆ ಎಂದೇ ಭಾವಿಸಲಾಗಿದೆ. ರಾಣೆಬೆನ್ನೂರು-ಶಿಕಾರಿಪುರ ಹೊಸ ರೈಲ್ವೇ ಮಾರ್ಗದ ಪ್ರಗತಿಯು ಆಶಾದಾಯಕವಾಗಿಲ್ಲ. ಮುಂದಿನ ಎಂಟು ದಿನಗಳೊಳಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಸಂಬAಧಿತ ಇಲಾಖಾಧಿಕಾರಿಗಳು ಸಮಗ್ರ ವರದಿ ನೀಡುವಂತೆ ಸೂಚಿಸಿದ ಅವರು, ಈ ಭಾಗದಲ್ಲಿ ಭೂಸ್ವಾದೀನ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ರೈತರಿಗೆ ಪರಿಹಾರಧನ ಒದಗಿಸುವ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ವ್ಯವಹರಿಸಿ, ಒಂದು ತಿಂಗಳೊಳಗಾಗಿ ಪರಿಹಾರಧನ ವಿತರಿಸುವಂತೆ ಸೂಚಿಸಿದರು.

ಮೋದಿಯವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಿಕಾರಿಪುರ-ರಾಣೆಬೆನ್ನೂರು ಮಾರ್ಗದ ಭೂಸ್ವಾದೀನ ಪ್ರಕ್ರಿಯೆ ಸಮಾಧಾನಕರವಾಗಿದ್ದರೂ ರಾಣೆಬೆನ್ನೂರು-ಶಿಕಾರಿಪುರ ಮಾರ್ಗದಲ್ಲಿ ಭೂಸ್ವಾದೀನ ಪ್ರಕ್ರಿಯೆ ನಿರೀಕ್ಷೆಯಂತೆ ಪೂರ್ಣಗೊಂಡಿಲ್ಲ. ಇನ್ನೂ 642ಎಕರೆ ಭೂಪ್ರದೇಶ ಮಾಲೀಕರಿಂದ ರೈಲ್ವೇ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ತುರ್ತಾಗಿ ಆಗಬೇಕಾಗಿದೆ. ಡಿಸೆಂಬರ್ ಮಾಸಾಂತ್ಯದೊಳಗಾಗಿ ಭೂಸ್ವಾದೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಂಯುಕ್ತವಾಗಿ ಈ ಕಾರ್ಯದಲ್ಲಿ ಸಮನ್ವಯತೆ ಸಾಧಿಸಿ, ಉದ್ದೇಶಿತ ಯೋಜನೆಯು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಉಷಾನರ್ಸಿಂಗ್ ಬಳಿಯ ವರ್ತುಲ ನವೀಕರಣಕ್ಕೆ ರೈಲ್ವೇ ಇಲಾಖೆಯಿಂದ ಮಹಾನಗರಪಾಲಿಕೆಗೆ ಈಗಾಗಲೇ 2ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಅಗತ್ಯವಿರುವ ಇನ್ನೂ 2.50ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗುವ ನಿರೀಕ್ಷೆಯಿಂದ ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಶ್ರೀಮತಿ ಕವಿತಾ ಯೋಗಪ್ಪನವರ್ ಅವರು ಹೇಳಿದರು.

ರೈಲ್ವೇ ಇಲಾಖಾಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ರೈಲ್ವೇ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸ್ಥಳೀಯ ಇಲಾಖಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ಅಮೃತ್ ಭಾರತ್ ಯೋಜನೆಯಡಿ ಶಿವಮೊಗ್ಗ, ಜಂಬಗಾರು ಹಾಗೂ ತಾಳಗುಪ್ಪ ರೈಲ್ವೇ ನಿಲ್ದಾಣಗಳ ಉನ್ನತೀಕರಣ ಕಾಮಕಾರಿಗಳಿಗಾಗಿ ಅಗತ್ಯ ಅನುದಾನವನ್ನು ಮಂಜೂರು ಮಾಡಿದೆ. ರೈಲ್ವೇ ಇಲಾಖೆಯ ಅಧಿಕಾರಿಗಳು ರಾಜ್ಯದ ಪ್ರತಿಷ್ಟಿತ ಜಿಲ್ಲೆಯಾಗಿರುವ ಶಿವಮೊಗ್ಗದ ವಿವಿಧ ರೈಲ್ವೇ ನಿಲ್ದಾಣಗಳನ್ನು ದೇಶದ ಮಾದರಿ ರೈಲ್ವೇನಿಲ್ದಾಣಗಳನ್ನಾಗಿ ನಿರ್ಮಿಸಬೇಕು. ಅದಕ್ಕಾಗಿ ಸ್ಥಳೀಯ ಅಧಿಕಾರಿ-ಜನಪ್ರತಿನಿಧಿಗಳ ಸಹಕಾರ ಪಡೆದು, ನೀಲನಕ್ಷೆ ತಯಾರಿಸುವಂತೆ ಅವರು ಸಲಹೆ ನೀಡಿದರು.

ಯಶವಂತಪುರ-ಶಿವಮೊಗ್ಗ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿರುವ ರೈಲನ್ನು ವಾರದ ಏಳು ದಿನಗಳ ಚಲಿಸುವಂತೆ ಹಾಗೂ ವಂದೇಭಾರತ್ ರೈಲು ಮಾರ್ಗವನ್ನು ಬೆಂಗಳೂರಿನಿಂದ ತಾಳಗುಪ್ಪವರೆಗೆ ವಿಸ್ತರಿಸಲು ವಿಶೇಷ ಗಮನಹರಿಸಲಾಗುವುದು. ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಈ ವಿಷಯದ ಬಗ್ಗೆ ಗಮನಹರಿಸಲಾಗುವುದು ಎಂದ ಅವರು, ಹಲವು ದಶಕಗಳ ಅನೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ರೈಲ್ವೇ ಇಲಾಖೆ ವಿಶೇಷ ಗಮನಹರಿಸಿದೆ. ಇದರೊಂದಿಗೆ ಸಿರ್ಸಿ-ತಾಳಗುಪ್ಪ-ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ 158ಕಿ.ಮೀ ದೂರದ ರೈಲ್ವೇ ಕಾಮಗಾರಿ ಪೂರ್ವ ಸರ್ವೇ ನಡೆಸಲು ಆದೇಶ ಹೊರಡಿಸಲಾಗಿದೆ. ಅಂಕೋಲ-ತಾಳಗುಪ್ಪ ಮಾರ್ಗದ ಬಗ್ಗೆಯೂ ಗಮನಹರಿಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ಸಕಾಲಿಕ ಸಹಕಾರ ಹಾಗೂ ಮಾರ್ಗದರ್ಶನದಿಂದಾಗಿ ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರೈಲ್ವೇ ಯೋಜನೆಗಳು ಯಶಸ್ಸು ಕಂಡಿವೆ. ಅಲ್ಲದೇ ದೇಶದಾದ್ಯಂತ ವರ್ಷಕ್ಕೆ ಸರಾಸರಿ ನೂರು ಕೋಟಿಗೂ ಹೆಚ್ಚಿನ ಜನ ರೈಲ್ವೇಪ್ರಯಾಣದ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ನಿರ್ಮಾಣದಲ್ಲಿ ಶಿಕಾರಿಪುರ-ಶಿವಮೊಗ್ಗ ಮಾರ್ಗದ ಭೂಸ್ವಾದೀನ ಕಾರ್ಯ ತಕ್ಕಮಟ್ಟಿನ ಯಶಸ್ಸು ಕಂಡಿದೆ. ರಾಣೆಬೆನ್ನೂರು-ಶಿಕಾರಿಪುರ ನಡುವಿನ ಭೂಸ್ವಾದೀನ ಕಾರ್ಯ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಹಾರನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಟಫಾರಂನ್ನು ಅಭಿವೃದ್ಧಿಪಡಿಸಲು ಇಲಾಖೆಯು ಈಗಾಗಲೇ 2ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...