alex Certify 2024 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ; ಹಾವೇರಿಯ ‘ಗುದ್ಲೆಪ್ಪ ಹಳ್ಳಿಕೇರಿ ಗುರುಕುಲ’ & ಪ್ರೊ.ಜಿಬಿ ಶಿವರಾಜು ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2024 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ ; ಹಾವೇರಿಯ ‘ಗುದ್ಲೆಪ್ಪ ಹಳ್ಳಿಕೇರಿ ಗುರುಕುಲ’ & ಪ್ರೊ.ಜಿಬಿ ಶಿವರಾಜು ಆಯ್ಕೆ

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಗಾಂಧಿವಾದಿ ಪ್ರೊ. ಜಿ.ಬಿ. ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗಳು ಆಯ್ಕೆಯಾಗಿವೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಗ್ರಾಮಸ್ವರಾಜ್, ಅಸ್ಪøಶ್ಯತೆ ನಿವಾರಣೆ, ಆರ್ಥಿಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ ಶಿಕ್ಷಣ ಮತ್ತಿತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹತ್ಸಾಧನೆ ಮಾಡಿದ ಮಹನೀಯರು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ಕರ್ನಾಟಕ ರಾಜ್ಯ ಸರ್ಕಾರವು 2014 ರಲ್ಲಿ ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ಸ್ಥಾಪಿಸಿ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಶಸ್ತಿ ಫಲಕ ಹಾಗೂ ರೂ.5 ಲಕ್ಷ ನಗದು ಒಳಗೊಂಡಿರುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು 2014 ರಿಂದ ಪ್ರದಾನ ಮಾಡುತ್ತಾ ಬಂದಿದೆ. 2023 ರ ವರೆಗೆ 8 ವ್ಯಕ್ತಿಗಳು ಹಾಗೂ 2 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2024ನೇ ಸಾಲಿನ ಪ್ರಶಸ್ತಿಯು ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರಿಗೆ ಮತ್ತು ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಸಂಸ್ಥೆಗೆ ವಿಂಗಡಿಸಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತವನ್ನು ತಲಾ ರೂ.2.5 ಲಕ್ಷಗಳಂತೆ ಸಮನಾಗಿ ಪುರಸ್ಕಾರ ನೀಡಿ ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಬರುವ ಅಕ್ಟೋಬರ್ 02 ಗಾಂಧಿ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಸನತ್ಕುಮಾರ್ ಬೆಳಗಲಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೂಡೆ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ಸದಸ್ಯರಾಗಿದ್ದರು.

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತರು
ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ
ನಿವೃತ್ತ ಉಪನ್ಯಾಸಕರಾಗಿರುವ ಪ್ರೊ. ಜಿ.ಬಿ. ಶಿವರಾಜು ಅವರು ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆಯನ್ನು ರೂಪಿಸಲು ಶ್ರಮಿಸಿದ್ದಾರೆ. 73 ವರ್ಷದ ಇವರು ತಮ್ಮ ನಿವೃತ್ತಿ ವೇತನವನ್ನು ಗಾಂಧೀ ವಿಚಾರಗಳನ್ನು ಯುವ ಜನರಿಗೆ ತಲುಪಿಸಲು ವಿನಿಯೋಗಿಸುತ್ತಿದ್ದಾರೆ. ಗಾಂಧಿ ಪ್ರಣೀತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮದ್ಯಪಾನ ಸಂಯಮ ಮಂಡಳಿಗಳ ಸಮನ್ವಯದ ಮೂಲಕ ಗಾಂಧಿ ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಅರಸೀಕೆರೆಯಲ್ಲಿನ ಕಸ್ತೂರ ಬಾ ಗಾಂಧಿ ಆಶ್ರಮದ ಪುನರುಜ್ಜೀವನಗೊಳಿಸಿದ್ದಾರೆ. ಮೂಡಿಗೆರೆಯ ಭಾರತಿ ಬೈಲ್ ಕೇಂದ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆ ಮಾರ್ನೋಮಿದೊಡ್ಡಿ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಟ್ರಸ್ಟ್ನ ಉಪಕೇಂದ್ರವನ್ನು ಸ್ಥಳೀಯರ ಸಹಕಾರದಿಂದ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕಾರ್ಯಾಗಾರವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಂಸ್ಥೆಯ 20 ಎಕರೆಗೂ ಹೆಚ್ಚು ಭೂಮಿಯಲ್ಲಿ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಸ್ಥಳೀಯರ ಸಹಕಾರದೊಂದಿಗೆ ನಿರ್ವಹಿಸುತ್ತಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಬರಮತಿ ಮಾದರಿಯ ಆಶ್ರಮ ನಿರ್ಮಾಣ. ಗದಗ ಜಿಲ್ಲೆಯಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಬರಮತಿ ಆಶ್ರಮದ ಮಾದರಿಯನ್ನು ನಿರ್ಮಿಸಿ ಗಾಂಧೀಜಿಯವರ ಬದುಕು ಸಾಧನೆಗಳನ್ನು ಯುವಜನರು ಹಾಗೂ ಗ್ರಾಮೀಣ ಭಾಗದ ಜನರಿಗೆ ಆಕರ್ಷಕವಾಗಿ ಅನಾವರಣಗೊಳಿಸಿದ್ದಾರೆ. ಗಾಂಧೀ ಸಾಹಿತ್ಯ ಸಂಘ, ಹರಿಜನ ಸೇವಕ ಸಂಘ ಮೊದಲಾದ ಸಂಸ್ಥೆಗಳನ್ನು ಪುನರಜ್ಜೀವಗೊಳಿಸಿದ್ದಾರೆ.

ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ

——- 1984 ರ ಅಕ್ಟೋಬರ್ 02 ರಂದು ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದಲ್ಲಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನವು ಸ್ಥಾಪಿಸಿದ ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯು ಕಳೆದ 39 ವರ್ಷಗಳಿಂದ ಗಾಂಧಿ ವಿಚಾರಗಳನ್ನು ಹೊಸ ಪೀಳಿಗೆಯಲ್ಲಿ ಅಳವಡಿಸಲು ಅಹರ್ನಿಶಿ ದುಡಿಯುತ್ತಿದೆ. ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳು ಸೇರಿದಂತೆ ಗ್ರಾಮೀಣ ಕೃಷಿಕ ಹಾಗೂ ಕೂಲಿಕಾರರ ಕುಟುಂಬದ ಹಿನ್ನೆಲೆಯ ಸಾವಿರಾರು ಪ್ರತಿಭಾವಂತ ಮಕ್ಕಳಿಗೆ ಊಟ, ವಸತಿ, ಇತರೆ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.

ಇಲ್ಲಿನ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆಗಳನ್ನು ಧರಿಸುತ್ತಾರೆ. ತಾವೇ ಬೆಳೆದ ಕೃಷಿ ಬೆಳೆಗಳಿಂದ ತಯಾರಿಸಿದ ಆಹಾರ ಸೇವಿಸುತ್ತಾರೆ. ದೇಶದ ಆಂತರಿಕ ಕಲಹಗಳನ್ನು ಕಿತ್ತೆಸೆಯುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ಜೊತೆಗೆ ಗಾಂಧೀ ವಿಚಾರಧಾರೆಯ ಅನುಸಾರ ಕೃಷಿ, ನೂಲು ಮತ್ತು ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ ಮುಂತಾದ ಸ್ವಾವಲಂಬಿ, ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಸ್ಥೆಯು ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 02ನೇ ಅಕ್ಟೋಬರ್ 2024 ರಂದು ಸಂಜೆ 4.30 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...