ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಯನ್ನು ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಹಲವು ಎಡವಟ್ಟುಗಳು ನಡೆದಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. 2 ತಿಂಗಳೊಳಗೆ ಪರೀಕ್ಷೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಕೆಪಿಎಸ್ ಸಿಗೆ ಸೂಚನೆ ನೀಡಿದ್ದಾರೆ.
ಬಳ್ಳಾರಿಯ ಸೇಂಟ್ ಜಾನ್ಸ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಓಪನ್ ಆಗಿರುವ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಮುಂಚೆಯೇ ಸೀಲ್ ಓಪನ್ ಆಗಿದೆ ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದರು.
ಬೆಳಗಾವಿಯ ಅಂಜುಮನ್ ಕಾಲೇಜಿನಲ್ಲಿ ಕೂಡ ಇದೇ ತರಹದ ಘಟನೆ ನಡೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಅಲ್ಲದೇ ಪ್ರಶ್ನೆ ಪತ್ರಿಕೆ ಕೊಡಲು 15 ನಿಮಿಷ ತಡ ಮಾಡಲಾಗಿದೆ. ಒಎಂಆರ್ ಶೀಟ್ ಕೂಡ ಅದಲು ಬದಲಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಇತ್ತೀಚೆಗೆ ನಡೆದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ದೋಷಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರಕಲು, ಪ್ರಶ್ನೆಪತ್ರಿಕೆಯ ದೋಷಗಳನ್ನು ತಕ್ಷಣ ಸರಿಪಡಿಸಬೇಕು, ಮರು ಪರೀಕ್ಷೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.