ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣಕ್ಕೆ ರಾಷ್ಟ್ರಪತಿಗಳ ಎಂಟ್ರಿಯಾಗಿದೆ.
ಕಾಂಗ್ರೆಸ್ ನಾಯಕ ರಮೇಶ್ ಬಾಬು ನೀಡಿರುವ ದೂರಿಗೆ ಪ್ರತಿಕ್ರಿಯೆ ನೀಡಿ ರಾಷ್ಟ್ರಪತಿಗಳ ಕಾರ್ಯದರ್ಶಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ರಾಷ್ಟ್ರಪತಿಗಳ ಕಾರ್ಯದರ್ಶಿ ರಾಜೇಶ್ ವರ್ಮಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತೆಗೆದುಕೊಂಡ ಪ್ರಾಸಿಕ್ಯೂಷನ್ ಕ್ರಮವನ್ನು ತೆಗೆದುಹಾಕುವಂತೆ ಕೋರಿ ಕಾಂಗ್ರೆಸ್ ನಾಯಕ ರಮೇಶ್ ಬಾಬು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇತ್ತೀಚೆಗೆ ದೂರು ದಾಖಲಾಗಿತ್ತು.ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ದೇವರಾಜು ಹಾಗೂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂಡಾಗೆ ವಂಚಿಸಿದ್ದಾರೆ ಎಂದು ದೂರಿದ್ದರು. ನಂತರ ಈ ಪ್ರಕರಣ ಭಾರಿ ಸುದ್ದಿಯಾಗಿ ರಾಜ್ಯಪಾಲರ ವರೆಗೂ ಹೋಗಿತ್ತು.